ನಿವೃತ್ತ ಡಿಐಜಿ ರಮೇಶ್ ಬಿಜೆಪಿ ಸೇರ್ಪಡೆ
ಹೊಸದುರ್ಗ: ಬಿಜೆಪಿ ರಾಷ್ಟ್ರೀಯ ತತ್ವ ಸಿದ್ಧಾಂತಗಳನ್ನು ಒಪ್ಪಿ ಬಿ.ಜೆ.ಪಿ.ಯನ್ನು ಸೇರಿರುವುದಾಗಿ ನಿವೃತ್ತ ಡಿಐಜಿ ಜಿ.ರಮೇಶ್ ಹೇಳಿದರು.
ಪಟ್ಟಣದ ಬಿ.ಜೆ.ಪಿ. ಕಚೇರಿಯಲ್ಲಿ ಮಂಗಳವಾರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಅವರು, 30 ವರ್ಷ ಸರ್ಕಾರಿ ಸೇವೆಯಲ್ಲಿದ್ದು, ಸಾರ್ವಜನಿಕರ ಸೇವೆ ಸಲ್ಲಿಸಲಾಗಿದೆ. ನಿವೃತ್ತಿ ನಂತರವೂ ಸಾರ್ವಜನಿಕರ ಸೇವೆ ಮಾಡುವ ಸದುದ್ದೇಶದಿಂದ ರಾಜಕೀಯಕ್ಕೆ ಬಂದಿದ್ದು, ಪಕ್ಷ ನೀಡುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವುದಾಗಿ ತಿಳಿಸಿದರು.
ದೇವಾಂಗ ಸಮಾಜದ ರಾಜ್ಯಾಧ್ಯಕ್ಷರಾದ ಮೇಲೆ ರಾಜ್ಯದ ಉದ್ದಗಲಕ್ಕೂ ಸುತ್ತುವ ಮೂಲಕ ಜನರ ಸಮಸ್ಯೆಗಳ ಬಗ್ಗೆ ಅರಿವು ಪಡೆಯಲಾಗಿದೆ. ಪಕ್ಷದ ಸಿದ್ಧಾಂತ ಚೌಕಟ್ಟಿನಲ್ಲಿ ಬಡವರು, ದೀನ ದಲಿತರ ಉದ್ಧಾರಕ್ಕೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು. ಮುಂದಿನ ಚುನಾವಣೆಯಲ್ಲಿ ಹೊಸದುರ್ಗ ತಾಲೂಕಿನಲ್ಲಿ ಬಿಜೆಪಿ ಸರ್ಕಾರದ ಶಾಸಕರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ತಾಲೂಕಿನ ಮುಖಂಡರಲ್ಲಿನ ಸಣ್ಣ ಪುಟ್ಟಭಿನ್ನಾಭಿಪ್ರಾಯವನ್ನು ಬಗೆಹರಿಸುವ ಮೂಲಕ ಎಲ್ಲ ಹಂತದ ಮುಖಂಡರ ಸಲಹೆ, ಸಹಕಾರ ಪಡೆದು ಪಕ್ಷ ಸಂಘಟನೆಗೆ ಶ್ರಮಿಸಲಾಗುವುದು ಎಂದರು.