Asianet Suvarna News Asianet Suvarna News

ಮನೆಗೆ ಹೊರಟವ ಹೋಗಿದ್ದು ಕಾರ್ಗಿಲ್ ಯುದ್ಧಕ್ಕೆ; ಏನಿದು ರೋಚಕ ಕಹಾನಿ?

ಕಾರ್ಗಿಲ್ ಯುದ್ಧದಲ್ಲಿ ಸೇವೆ ಸಲ್ಲಿಸಿದ ಯೋಧರೊಬ್ಬರು ಯುದ್ಧದ ರೋಚಕ ಅನುಭವವನ್ನು ಕನ್ನಡ ಪ್ರಭದೊಂದಿಗೆ ಹಂಚಿಕೊಂಡಿದ್ದಾರೆ. ಆಗಿನ ಸ್ಥಿತಿ, ಯುದ್ಧ ನಡೆಯುತ್ತಿದ್ದಾಗಿನ ಕಷ್ಗಳು, ಎದುರಾದ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ. ಈಗಿನ ಸೈನಿಕರ ಸ್ಥಿತಿ ಬಗ್ಗೆಯೂ ಹೇಳಿದ್ದಾರೆ. ಇದನ್ನೆಲ್ಲಾ ಅವರದೇ ಮಾತುಗಳಲ್ಲಿ ಕೇಳಿ. 

EX-Army person shares his experience of Kargil War with Kannada Prabha
Author
Bengaluru, First Published Aug 30, 2018, 10:55 AM IST

ಬೆಂಗಳೂರು (ಆ. 30): 19 ವರ್ಷ ಸೇವೆ ಸಲ್ಲಿಸಿದ್ದೆ. ಸ್ವಯಂ ನಿವೃತ್ತಿಗೆ ಅರ್ಜಿ ಹಾಕಿದ್ದೆ. ಇನ್ನೇನು ಒಪ್ಪಿಗೆ ಸಿಕ್ಕೀತು ಎನ್ನುವಷ್ಟರಲ್ಲಿ ಕಾರ್ಗಿಲ್ ಯುದ್ಧದ ಘೋಷಣೆ ಆಯಿತು. ಮನೆ ಕಡೆಗೆ ಹೊರಡಲು ಸಜ್ಜಾಗಿದ್ದ ನಾನು ಸೀದಾ ಹೋಗಿದ್ದು ಕಾರ್ಗಿಲ್‌ನ ಯುದ್ಧಭೂಮಿಗೆ!

ಜಮ್ಮು-ಕಾಶ್ಮೀರ, ಅರುಣಾಚಲ ಪ್ರದೇಶ, ಅಸ್ಸಾಂ ಹೀಗೆ ಹಲವು ಕಡೆಗಳಲ್ಲಿ ಉಗ್ರರೊಂದಿಗೆ ಹೋರಾಡಿದ್ದ ನನಗೆ ಸೈನಿಕನಾಗಿ ಇಂತಹ ಒಂದೂ ಯುದ್ಧದಲ್ಲಿ ಭಾಗವಹಿಸದೇ ನಿವೃತ್ತಿಯಾಗುತ್ತಿದ್ದೇನೆ ಎನ್ನುವ ಬೇಸರ ಮನದಲ್ಲಿತ್ತು. 19 ವರ್ಷಗಳ ಸೇವೆಯ ನಂತರ ನಿವೃತ್ತಿ ಪಡೆಯುವ ಸಮಯದಲ್ಲಿ ಕಾರ್ಗಿಲ್ ಯುದ್ಧ ಘೋಷಣೆ ಆಯಿತು. ಯುದ್ಧ ಮಾಡುವ ಹುಮ್ಮಸ್ಸಿನಲ್ಲಿದ್ದ ನನಗೆ ಯುದ್ಧ ಮಾಡಿಯೇ ನಿವೃತ್ತಿಯಾಗೋಣ, ಇಲ್ಲವೇ ಭಾರತ ಮಾತೆಗಾಗಿ ಜೀವ ಅರ್ಪಿಸೋಣ ಎಂದು‘ಮಾಡು ಇಲ್ಲವೇ ಮಡಿ’ ಎನ್ನುವ ಸಂಕಲ್ಪದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದೆ.

76 ದಿನಗಳ ಕಾಲ ಕಾರ್ಗಿಲ್ ಯುದ್ಧದಲ್ಲಿ ವೈರಿ ಸೈನ್ಯವನ್ನು ಹಿಮ್ಮೆಟ್ಟಿಸಿ ಜಯಶಾಲಿಯಾಗಿ ನಿವೃತ್ತಿ ಪಡೆದೆ. ಯುದ್ಧದಲ್ಲಿ ಪಾಲ್ಗೊಳ್ಳಬೇಕೆಂಬ ನನ್ನ ಕನಸೂ ನನಸಾಯಿತು. ಈಗ ಆ ಹೆಮ್ಮೆ, ಆತ್ಮಸಂತೋಷ ನನಗಿದೆ. ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದಕ್ಕೂ ಸಾರ್ಥಕವಾಯಿತು ಎಂಬ ಸಾರ್ಥಕತೆಯ ಭಾವ ಇದೆ.

ಮೊದಲ ದಿನವೇ ಬಲಿ

ಬೇಸರದ ಸಂಗತಿ ಎಂದರೆ, ಕಾರ್ಗಿಲ್ ಯುದ್ಧದ ಮೊದಲನೇ ದಿನವೇ ನಮ್ಮ ಬೆಟಾಲಿಯನ್ ಬ್ಯಾರಲ್ ಆಕಸ್ಮಿಕವಾಗಿ ದಾಳಿಗೆ ತುತ್ತಾದ ಪರಿಣಾಮ ತಮಿಳುನಾಡಿನ ಕಾಮರಾಜ್ ಎಂಬ ಸೈನಿಕ ಸ್ಥಳದಲ್ಲಿಯೇ ಮೃತಪಟ್ಟು ಐವರಿಗೆ ತೀವ್ರ ಪೆಟ್ಟಾಯಿತು. ಅದೃಷ್ಟವಶಾತ್ ನಾನು ಬದುಕಿದೆ. ವೈರ್‌ಲೆಸ್ ರೇಡಿಯೋ ಆಪರೇಟರ್ ಆಗಿರುವ ಕಾರಣ ಯುದ್ಧದಲ್ಲಿ ಸೈನಿಕರಿಗೆ ಸಂದೇಶಗಳನ್ನು ನೀಡುವುದಲ್ಲದೇ ವೈರಿಗಳಿದ್ದ ಕಡೆಗೆಲ್ಲಾ ಬಾಂಬ್‌ಗಳನ್ನು ಹಾರಿಸುವ ಕೆಲಸವನ್ನೂ ಮಾಡಬೇಕು.

ಇಂತಹ ಸಂದರ್ಭದಲ್ಲಿ ಚಾಲಕ, ಅಡುಗೆ ಮಾಡುವವ ಎಂಬ ಭೇದ-ಭಾವವಿಲ್ಲ. ಎಲ್ಲರೂ ತಮ್ಮ ಕೆಲಸಗಳೊಂದಿಗೆ ವೈರಿಗಳೊಂದಿಗೆ ಯುದ್ಧ ಸಹ ಮಾಡಲೇಬೇಕು. ವೈರಿಗಳ ಏಟಿಗೆ ಎದಿರೇಟು ನೀಡಲೇಬೇಕು. ಯುದ್ಧದಲ್ಲಿ ಬರೀ ನಾವಷ್ಟೇ ಅಲ್ಲ, ವೈರಿಗಳಿಂದಲೂ ನಿರಂತರವಾಗಿ ಸಿಡಿಯುವ ಬಾಂಬ್‌ಗಳು ನಮ್ಮನ್ನು ವಿಚಲಿತ ಮಾಡುತ್ತವೆ.

ಯುದ್ಧದ ಸಂದರ್ಭದಲ್ಲಿ ನನ್ನ ಎದುರೇ ಬಿದ್ದ ಬಾಂಬ್‌ನ ಪರಿಣಾಮ ಬಲಗಡೆ ಇದ್ದ ಕರ್ನಾಟಕದವರೇ ಆದ ಕಾವೇರಪ್ಪ ಎಂಬ ಸೈನಿಕನ ರುಂಡ, ಎಡಬದಿ ಇದ್ದ ನಮ್ಮ ವಾಹನ ಚಾಲಕ ರಾಜಸ್ಥಾನದ ದಶರಥ ಎಂಬುವರ ಕೈ ತುಂಡರಿಸಿದವು. ಮೊದಲ ದಿನದಿಂದ ಯುದ್ಧ ಮುಗಿಯುವವರೆಗೂ ಎಡಗೈಯಲ್ಲಿ ಜೀವ ಹಿಡಿದುಕೊಂಡಿದ್ದೆ.

ಯುದ್ಧ ಗೆದ್ದ ತಕ್ಷಣ ಮನಸ್ಸಿನಲ್ಲಿ ಜೀವನದ ಸಾರ್ಥಕತೆ ಉಂಟಾಯಿತು. ಇಂತಹ ಹತ್ತು ಯುದ್ಧಗಳನ್ನು ಮಾಡಬಲ್ಲೆ ಎಂಬ ಆತ್ಮವಿಶ್ವಾಸವೂ ಬಂತು. ಆದರೆ, ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಯುದ್ಧದ 7 ತಿಂಗಳ ನಂತರದಲ್ಲಿ 2000 ನೇ ಇಸವಿಯಲ್ಲಿ ಸ್ವಯಂ ನಿವೃತ್ತಿ ಪಡೆದು ಧಾರವಾಡದ ಕಡೆ ಮುಖ ಮಾಡಿದೆ.

ಜೀವಭಯವೇ ಇರಲಿಲ್ಲ!

ನನಗೇನೂ ಸೈನಿಕನಾಗಬೇಕೆಂಬ ಇಚ್ಛೆ ಇರಲಿಲ್ಲ. ಮನೆಯಲ್ಲಿ ತೀವ್ರ ಬಡತನವಿದ್ದ ಕಾರಣ ಎಸ್ಸೆಸ್ಸೆಲ್ಸಿ ನಂತರದಲ್ಲಿ 1981 ರಲ್ಲಿ ನೌಕರಿ ಹುಡುಕಿ ಹೊರಟವನಿಗೆ ಸಹೋದರಿ ಸಲಹೆಯಂತೆ ಬೆಳಗಾವಿಯಲ್ಲಿ
ನಡೆದ ಸೇನಾ ಭರ್ತಿಯಲ್ಲಿ ಅರ್ಹನಾಗಿ ಸೈನಿಕನಾದೆ. ಮೂಲತಃ ಹಾವೇರಿಯ ಗಳಗನಾಥ ಊರಿನವರು ನಾವು. ಸದ್ಯ ಧಾರವಾಡದ ಮಂಗಳವಾರಪೇಟೆಯಲ್ಲಿ ವಾಸ. ವೈರ್‌ಲೆಸ್ ರೇಡಿಯೋ ಆಪರೇಟರ್
ಹುದ್ದೆಗೆ ನೇಮಕನಾಗಿ ನಾಸಿಕ್‌ನಲ್ಲಿ ಸೈನಿಕ ತರಬೇತಿ ಪಡೆದು, 244-ಮೀಡಿಯಂ ರೆಜಿಮೆಂಟ್‌ನಲ್ಲಿ ಸೇವೆ ಆರಂಭವಾಯಿತು.

ಅಲ್ಲಿಂದ ನಾಗಪುರದ ಕಾಮಟಿ, ಅಸ್ಸಾಂನ ತೇಜ್‌ಪುರ, ಅರುಣಾಚಲ ಪ್ರದೇಶದ ತವಾಂಗ್, ದೇವಾಂಗ್, ಇಟಾನಗರ, ಟೂಟಿಂಗ್, ಮಂಜುಕಾಗಳಲ್ಲಿ ಸೇವೆ ಸಲ್ಲಿಸಿದೆ. 1990 ರಲ್ಲಿ ಪಂಜಾಬ್‌ನ ಭಟಿಂಡಾ
ದಲ್ಲಿದ್ದೆ. ನಂತರ 1998 ರ ವರೆಗೂ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದೆ. ಶ್ರೀನಗರದ ಬಾರಾ ಮುಲ್ಲಾದಲ್ಲಿದ್ದಾಗ ಕಾರ್ಗಿಲ್ ಯುದ್ಧದ ಘೋಷಣೆಯಾಯಿತು.

ನಾವು ಯುದ್ಧ ಮಾಡಿದ ಸ್ಥಳ ದರಾಜ್. ಸಂಪೂರ್ಣ ಮಂಜುಗಡ್ಡೆಯಿಂದ ತುಂಬಿದ ಪ್ರದೇಶ. ಸಾಕಷ್ಟು ಬಾರಿ ನಮ್ಮ ವಾಹನಗಳಿಗೆ ಬಾಂಬ್‌ಗಳು ಬಿದ್ದ ಕಾರಣ ಊಟವಿಲ್ಲದೇ ಯುದ್ಧದಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿತ್ತು. ಎಸ್‌ಎಲ್‌ಆರ್, ಎಕೆ-47, ಎಕೆ-56, ಎಲ್‌ಎಂಜಿ, ಕಾರ್ಬನ್ ಮಶೀನ್ 9 ಎಂಎಂ ಹಾಗೂ ದೊಡ್ಡ-ದೊಡ್ಡ ತೋಪುಗಳನ್ನು ಬಳಸಿದ್ದೇನೆ. ಬರೀ ಕಾರ್ಗಿಲ್ ಅಲ್ಲದೇ, ಅಸ್ಸಾಂನಲ್ಲಿ ಉಲ್ಫಾ ಉಗ್ರರು ಹಾಗೂ ಪಂಜಾಬ್ ಅಮೃತಸರನಲ್ಲೂ ಭಯೋತ್ಪಾದಕರೊಂದಿಗೆ ಸೆಣಸಾಡಿದ್ದೇನೆ.

ಆದರೆ ಒಂದೇ ಒಂದು ದಿನ ಜೀವ ಭಯ ನನ್ನನ್ನು ಕಾಡಲಿಲ್ಲ. ಸೈನಿಕನೊಬ್ಬ ಜೀವದ ಹಂಗು ತೊರೆದರೆ ಮಾತ್ರ ನಾಗರಿಕರ ಮತ್ತು ದೇಶದ ರಕ್ಷಣೆ ಸಾಧ್ಯ. ಮೂರು ಮೆಡಲ್ ಬಂದಿವೆ ಸೇವಾ ಮೆಡಲ್ ಸೇರಿದಂತೆ ಒಟ್ಟು 3 ಮೆಡಲ್‌ಗಳು ಬಂದಿವೆ. ಕಾರ್ಗಿಲ್ ಯುದ್ಧದ ಮೆಡಲ್ 20 ವರ್ಷಗಳೂ ಕಳೆದರೂ ಬಂದಿಲ್ಲ. ಸೈನ್ಯದಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳಿಂದ ಹಿಡಿದು ಸಿಪಾಯಿ ವರೆಗೂ ಸಾಕಷ್ಟು ಮೆಡಲ್‌ಗಳನ್ನು ಪಡೆದಿರುತ್ತಾರೆ.

ನಾನೊಬ್ಬ ಸೈನಿಕನಾಗಿದ್ದು ಇಷ್ಟೊಂದು ಮೆಡಲ್ ಪಡೆದಿದ್ದೇನೆ ಎಂಬ ಗೌರವ, ಹೆಮ್ಮೆ ಇರುತ್ತದೆ. ಆದರೆ, ಸಾಕಷ್ಟು ಬಾರಿ ಮೆಡಲ್‌ಗಳು ನಮ್ಮಗೆ ಲಭ್ಯವಾಗುವುದಿಲ್ಲ. ಮೆಡಲ್‌ಗಳನ್ನು ಆಯಾ ಸೈನಿಕರಿಗೆ ತಲುಪಿಸುವ ಕೆಲಸವಾಗಬೇಕಿದೆ.

ಸರ್ಕಾರಗಳ ಗೌರವ ಅಲ್ಪ 

ದೇಶಕ್ಕಾಗಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಸಾಕಷ್ಟು ಸಂಕಷ್ಟಗಳನ್ನೂ ಉಂಡಿದ್ದೇನೆ. ಸೈನಿಕನಿದ್ದಾಗ ತಂದೆ-ತಾಯಿ, ಮಕ್ಕಳ ಪರಿವೇ ಇಲ್ಲದೇ ಯುದ್ಧದಲ್ಲಿ ಭಾಗವಹಿಸಿದ್ದೇನೆ. ಜೊತೆಗಿದ್ದ ಸ್ನೇಹಿತರನ್ನು ಯುದ್ಧದಲ್ಲಿ ಕಳೆದುಕೊಂಡಿದ್ದೇನೆ. ದೇಶಕ್ಕಾಗಿ ಇಷ್ಟೆಲ್ಲಾ ಸೇವೆ ಮಾಡಿದರೂ ನಿವೃತ್ತ ಸೈನಿಕರಿಗೆ ಆಳುವ ಸರ್ಕಾರಗಳು ಕೊಡುವ ಗೌರವ ಅಲ್ಪ.

ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿಯ ಕೃಷ್ಣಾ ಜೋಶಿ ಎಂಬುವರು ಪ್ರತಿ ವರ್ಷ ಧಾರವಾಡದಲ್ಲಿನ ಕಾರ್ಗಿಲ್ ಸ್ಥೂಪದಲ್ಲಿ ವಿಜಯೋತ್ಸವ ಸಂದರ್ಭದಲ್ಲಿ ನನ್ನನ್ನು ಕರೆದು ಗೌರವಿಸುತ್ತಾರೆ, ಅದಷ್ಟೇ ಆತ್ಮ ತೃಪ್ತಿ. ಅದನ್ನು ಹೊರತುಪಡಿಸಿ ನಾನಿನ್ನೂ ಬಾಡಿಗೆ ಮನೆಯಲ್ಲಿದ್ದೇನೆ. ಒಂದಿಂಚೂ ಭೂಮಿ ಇಲ್ಲ. ಬಡತನ ಮೊದಲಿನಂತೆಯೇ ಇದೆ. ನಿವೃತ್ತ ಯೋಧರಿಗೆ ಜಮೀನು ಕೊಡ ಬೇಕಿದ್ದರೂ ಅಧಿಕಾರಿಗಳು ಕಣ್ಣಾಮುಚ್ಚಾಲೆ ಆಡುತ್ತಾರೆ.

ಆಡಳಿತದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಆದ್ದರಿಂದ ಈ ನಾಗರಿಕ ಸಮಾಜದಲ್ಲಿರುವ ಬದಲು ಸೈನಿಕನಾಗಿಯೇ ದೇಶಕ್ಕೆ ಜೀವ ಬಿಟ್ಟಿದ್ದರೆ ಅದೆಷ್ಟೋ ಚೆನ್ನಾಗಿರುತ್ತಿತ್ತು ಎಂಬ ಆಲೋಚನೆಗಳು ಬರುತ್ತವೆ.

ನಿರೂಪಣೆ : ಬಸವರಾಜ ಹಿರೇಮಠ ಧಾರವಾಡ

ಏಳುಕೋಟೆಪ್ಪ ಗೋವಿಂದ ಭಟ್, ನಿವೃತ್ತ ಹವಾಲ್ದಾರ್ ಬಾಲೆಹೊಸೂರ 

Follow Us:
Download App:
  • android
  • ios