ಅಮರಾವತಿ[ಆ.26]: ಆಂಧ್ರಪ್ರದೇಶ ವಿಧಾನಸಭೆಯಿಂದ ನಾಪತ್ತೆಯಾಗಿದ್ದ ಬೆಲೆ ಬಾಳುವ ಪೀಠೋಪಕರಣಗಳು ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್‌, ಟಿಡಿಪಿ ನಾಯಕ ಕೊಡೆಲ ಶಿವಪ್ರಸಾದ್‌ ರಾವ್‌ ಅವರ ಪುತ್ರನ ಶೋರೂಂನಲ್ಲಿ ಪತ್ತೆಯಾದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಲ್ಲಿಕೆಯಾದ ದೂರು ಆಧರಿಸಿ, ಆಂಧ್ರ ಪೊಲೀಸರು ಮಾಜಿ ಸ್ಪೀಕರ್‌ ವಿರುದ್ಧ ಗಂಭೀರ ಆರೋಪಗಳ ಕೇಸು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ರಾವ್‌ ಅವರು ಎದೆನೋವಿನ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಿಧಾನಸಭೆಗೆ ಸೇರಿದ ಕಂಪ್ಯೂಟರ್‌, ಸೋಫಾ, ಎ.ಸಿ, ಕುರ್ಚಿ, ಟೇಬಲ್‌, ಸೋಫಾ ಮೊದಲಾದವುಗಳು, ಗುಂಟೂರಿನಲ್ಲಿರುವ ರಾವ್‌ ಅವರ ಪುತ್ರನ ಶೋರೂಂನಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ರಾಜ್ಯ ವಿಧಾನಸಭೆಯ ಅಧಿಕಾರಿಯೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾವ್‌ ವಿರುದ್ಧ ಕೇಸು ದಾಖಲಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾವ್‌, ಆಂಧ್ರ ವಿಧಾನಸಭೆಯನ್ನು 2017ರಲ್ಲಿ ಹೈದರಾಬಾದ್‌ನಿಂದ ಅಮರಾವತಿಗೆ ವರ್ಗಾಯಿಸಲಾಗಿತ್ತು. ಈ ವೇಳೆ ವಿಧಾನಸಭೆಯಲ್ಲಿ ಇದ್ದ ಉಪಕರಣಗಳನ್ನು ಸುರಕ್ಷತೆ ದೃಷ್ಟಿಯಿಂದ ನಾನು ಇಟ್ಟುಕೊಂಡಿದ್ದೆ. ಇತ್ತೀಚೆಗೆ ಈ ಬಗ್ಗೆ ಸರ್ಕಾರದ ಗಮನಕ್ಕೂ ತಂದು, ಅವುಗಳನ್ನು ಕೊಂಡೊಯ್ಯುವಂತೆ ಹೇಳಿದ್ದೆ. ಆದರೆ ಸರ್ಕಾರ ಪ್ರತಿಕ್ರಿಯೆ ನೀಡಿರಲಿಲ್ಲ ಎಂದಿದ್ದಾರೆ. ಆದರೆ ವೈಎಸ್‌ಆರ್‌ ಕಾಂಗ್ರೆಸ್‌ ನಾಯಕರು ಮಾತ್ರ ರಾವ್‌ ಅವರನ್ನು ಕಳ್ಳ ಎಂದು ದೂರಿದ್ದಾರೆ.