ಅಹಮದಾಬಾದ್‌: ತಮ್ಮ ಸರ್ಕಾರದಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಜಾಗವಿಲ್ಲದಿರುವುದರಿಂದ, ಸರ್ಕಾರ ಬಿಡುಗಡೆಗೊಳಿಸುವ ಪ್ರತಿಯೊಂದು ರು. ಪ್ರತಿಯೊಂದು ಪೈಸೆಯೂ ಬಡವರಿಗೆ ತಲುಪುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್‌ನ ಜುಜ್ವಾದಲ್ಲಿ ನಡೆದ ಪ್ರಧಾನ ಮಂತ್ರಿ ವಸತಿ ಯೋಜನೆ-ಗ್ರಾಮೀಣದ ಫಲಾನುಭವಿಗಳ ‘ಇ-ಗೃಹಪ್ರವೇಶ’ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೇಂದ್ರದ ಮಹತ್ವಾಕಾಂಕ್ಷಿ ವಸತಿ ಯೋಜನೆಯ ಪ್ರಯೋಜನ ಪಡೆಯಲು ಈಗ ಜನರು ಲಂಚ ನೀಡಬೇಕಾಗಿಲ್ಲ. 2022ರೊಳಗೆ ಪ್ರತಿಯೊಂದು ಕುಟುಂಬಕ್ಕೂ ತಮ್ಮದೇ ಮನೆಯನ್ನು ಒದಗಿಸುವ ಗುರಿಯನ್ನು ಹೊಂದಿದ್ದೇನೆ ಎಂದೂ ಅವರು ತಿಳಿಸಿದರು.

ಸ್ವಚ್ಛ ಭಾರತ ನೇರವಾಗಿ ಆರೋಗ್ಯಕ್ಕೆ ಸಂಬಂಧಿಸಿದುದಾಗಿದೆ. ನಾನು ಸ್ವಚ್ಛತೆಯ ಬಗ್ಗೆ ಮಾತನಾಡುವಾಗ ನನ್ನನ್ನು ತಮಾಷೆ ಮಾಡಲಾಗುತ್ತಿದೆ. ಇದೇ ಕೆಲಸವನ್ನು 70 ವರ್ಷಗಳ ಹಿಂದೆ ಮಾಡಿದ್ದಿದ್ದರೆ, ದೇಶ ಈಗ ರೋಗ-ಮುಕ್ತವಾಗುತಿತ್ತು ಎಂದು ಮೋದಿ ಹೇಳಿದರು.

ಇಂದಿರಾ ಆವಾಜ್‌ ಯೋಜನೆಯನ್ನು 2016ರಲ್ಲಿ ಪ್ರಧಾನ ಮಂತ್ರಿ ಆವಾಜ್‌ ಯೋಜನಾ-ಗ್ರಾಮೀಣ ಎಂದು ಮರುನಾಮಕರಣಗೊಳಿಸಿ ಜಾರಿಗೊಳಿಸಲಾಗಿದೆ. ‘2022ರೊಳಗೆ ಎಲ್ಲರಿಗೂ ವಸತಿ’ ಯೋಜನೆಯಡಿ 2019ರೊಳಗೆ 1 ಕೋಟಿ ಮನೆ ಮತ್ತು 2022ರೊಳಗೆ 2.95 ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ.