ಶಿವಮೊಗ್ಗ :  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಮೈತ್ರಿ ಅಭ್ಯರ್ಥಿ ಎದುರು ಭಾರಿ ಅಂತರದಿಂದ ಗೆಲುವು ಸಾಧಿಸಿದರು. ಆದರೆ ಗೆಲುವು ಅಸಾಧ್ಯ ಎಂದು ಅಪಪ್ರಚಾರ ನಡೆದಿದ್ದು, ತಮ್ಮ ಪುತ್ರನ ಗೆಲುವಿಗೆ ಈಶ್ವರಪ್ಪ ಕಾರಣ ಎಂದು ಬಿ.
ಎಸ್ ಯಡಿಯೂರಪ್ಪ ಹೇಳಿದರು. 

ಶಿವಮೊಗ್ಗದಲ್ಲಿ ಮಾತನಾಡಿದ ಅವರು ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ರಾಘವೇಂದ್ರ ಗೆಲುವು ಅಸಾಧ್ಯ ಎನ್ನುತ್ತಿದ್ದರು. ಆದರೆ ನಮಗೆ ಬೈಂದೂರು ಕ್ಷೇತ್ರದಲ್ಲೇ 70 ಸಾವಿರ ಮತಕ್ಕೂ ಹೆಚ್ಚು ಲೀಡ್ ಬಂದಿದೆ. ಈಶ್ವರಪ್ಪ ಅವರ ಪ್ರಯತ್ನದಿಂದ ಶಿವಮೊಗ್ಗದಲ್ಲಿಯೂ ಬಿಜೆಪಿ ಅಭ್ಯರ್ಥಿಗೆ 47 ಸಾವಿರ ಓಟ್ ಲೀಡ್ ಬರುವಂತಾಯ್ತು ಎಂದರು.

'ನಾಲ್ವರು ನಾಯಕರನ್ನು ಬಿಜೆಪಿಗೆ ಕಳಿಸಿದ ಸಿದ್ದರಾಮಯ್ಯ'

ಪರಿಶಿಷ್ಟ ಜಾತಿ ಹಾಗೂ ವರ್ಗಕ್ಕೆ ಮೀಸಲಿಟ್ಟಿದ್ದ 7 ಕ್ಷೇತ್ರಗಳಲ್ಲಿಯೂ ಕೂಡ ನಾವೇ ಗೆಲುವು ಸಾಧಿಸಿರುವುದು ವಿಶೇಷ. ನಾವು ಬೆಂಬಲ ನೀಡಿದ ಸುಮಲತಾ ಅಂಬರೀಶ್ ಚುನಾವಣೆಯಲ್ಲಿ ಗೆದ್ದಿರುವುದು ಇತಿಹಾಸದಲ್ಲಿ ದಾಖಲೆಯಾಗಿದೆ. ಇನ್ನೂ ಸ್ವಲ್ಪ ಪ್ರಯತ್ನಿಸಿದಲ್ಲಿ ಹಾಸನದಲ್ಲಿಯೂ ಗೆಲ್ಲುವುದು ಅಸಾಧ್ಯವಾಗಿರಲಿಲ್ಲ ಎಂದು ಹೇಳಿದರು.

ರಾಜ್ಯದ ನಾಲ್ವರಿಗೆ ಕೇಂದ್ರದಲ್ಲಿ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ದೇಶದ ಎಲ್ಲ ರೈತರಿಗೆ 6 ಸಾವಿರ ರೂಪಾಯಿ ನೀಡುವ ಐತಿಹಾಸಿಕ ತೀರ್ಮಾನವನ್ನು ಪ್ರಧಾನಿ ತೆಗೆದುಕೊಂಡಿದ್ದಾರೆ.  ನರೇಂದ್ರ ಮೋದಿ ಅವರನ್ನು ನಾನು ಅಭಿನಂದಿಸುತ್ತೇನೆ ಎಂದು ಬಿಎಸ್ ವೈ ಹೇಳಿದರು. 

ಇನ್ನು ರಾಜ್ಯ ರಾಜಕಾರಣದ ಬಗ್ಗೆಯೂ ಪ್ರಸ್ತಾಪಿಸಿದ ಅವರು ನಾವು ಸ್ವಲ್ಪ ದಿನಗಳ ಕಾಲ ನಾವು ಶಾಂತವಾಗಿರುತ್ತೇವೆ. ಮೈತ್ರಿ ಸರ್ಕಾರ ಅವರ ಕಚ್ಚಾಟದಿಂದಲೇ ಬಿದ್ದು ಹೋಗುತ್ತದೆ.  ಅವರೇ ಬಡಿದಾಡಿಕೊಳ್ಳುತ್ತಿದ್ದಾರೆ. ಅದನ್ನು ನಾವು ನೋಡುತ್ತಿದ್ದೇವೆ. ಅವರೇ ಬಡಿದಾಡಿಕೊಂಡು ಸರ್ಕಾರ ಬೀಳುವುದು ಖಚಿತವಾಗಿದ್ದು, ಈ ನಿಟ್ಟಿನಲ್ಲಿ ನಾವು ಮಧ್ಯ ಪ್ರವೇಶಿಸುವುದಿಲ್ಲ.‌ ಬದಲಿಗೆ ಕಾದು ನೋಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.