ನವದೆಹಲಿ(ಸೆ. 11): ಕಾರ್ಮಿಕರ ಭವಿಷ್ಯ ನಿಧಿಯ ಮೇಲೆ ನೀಡಲಾಗುವ ಬಡ್ಡಿ ದರವನ್ನು ಕೇಂದ್ರ ಸರಕಾರ ಇನ್ನಷ್ಟು ಇಳಿಸುವ ಸಾಧ್ಯತೆ ಇದೆ. ಈ ವರ್ಷ ಹಣಕಾಸು ಸಚಿವಾಲಯದ ಅಣತಿಯ ಮೇರೆಗೆ ಕಾರ್ಮಿಕ ಸಚಿವಾಲಯವು ಪ್ರಸಕ್ತ ಸಾಲಿನ ಹಣಕಾಸು ವರ್ಷದಲ್ಲಿ ಪಿಎಫ್ ಹಣದ ಮೇಲಿನ ಬಡ್ಡಿ ದರವನ್ನು 8.6%ಗೆ ಇಳಿಸಲಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವಿತ್ತೀಯ ವರ್ಷದಲ್ಲಿ ಕಾರ್ಮಿಕ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್'ಓ) 8.95% ಬಡ್ಡಿ ನೀಡಲು ಶಕ್ಯವಿದೆ ಎಂದು ಹೇಳಲಾಗಿದ್ದರೂ ಹಣಕಾಸು ಇಲಾಖೆ ಬಡ್ಡಿದರವನ್ನು 8.7%ಗೆ ಇಳಿಸಲು ನಿರ್ಧರಿಸಿತ್ತು. ಆದರೆ, ಜನಸಾಮಾನ್ಯರು ಹಾಗೂ ಕಾರ್ಮಿಕ ಸಂಘಟನೆಗಳ ಪ್ರತಿಭಟನೆಗೆ ಬಗ್ಗಿದ ಕಾರ್ಮಿಕ ಸಚಿವಾಲಯ ಬಡ್ಡಿ ದರವನ್ನು 8.8%ಗೆ ನಿಗದಿ ಮಾಡಿತ್ತು. ಆದರೆ, ಈ ವರ್ಷ ಹಣಕಾಸು ಸಚಿವಾಲಯವು ಬಡ್ಡಿದರವನ್ನು ಇನ್ನಷ್ಟು ಇಳಿಸಿ 8.6%ಗೆ ನಿಗದಿ ಮಾಡಲಿದ್ದು, ಕಾರ್ಮಿಕ ಇಲಾಖೆಯನ್ನೂ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ಆದರೆ, ಕೆಲ ಮೂಲಗಳ ಪ್ರಕಾರ ಪಿಂಚಣಿ ಸಂಸ್ಥೆಯು ಪ್ರತಿ ವರ್ಷದ ವಾಡಿಕೆಯಂತೆ ಇನ್ನೂ ಕೂಡ ಪ್ರಸಕ್ತ ಸಾಲಿನ ತನ್ನ ಆದಾಯದ ಅಂದಾಜು ಮಾಡಿಲ್ಲ. ಈ ಆದಾಯ ಅಂದಾಜಿನ ವರದಿ ಬಂದ ಬಳಿಕ ಪಿಂಚಣಿ ಸಂಸ್ಥೆಯ ಕೇಂದ್ರೀಯ ಟ್ರಸ್ಟೀ ಬೋರ್ಡ್(ಸಿಬಿಟಿ) ಸೂಕ್ತ ಬಡ್ಡಿದರವನ್ನು ನಿಗದಿ ಮಾಡುತ್ತದೆ. ಬಳಿಕ, ಹಣಕಾಸು ಇಲಾಖೆಯ ಅನುಮೋದನೆ ದೊರೆಯಬೇಕಾಗುತ್ತದೆ. ಈ ಪ್ರಕ್ರಿಯೆ ಪ್ರಸಕ್ತ ವರ್ಷದ ಸಾಲಿನಲ್ಲಿ ಇನ್ನೂ ಆಗಿಲ್ಲ. ಸಿಬಿಟಿ ಯಾವ ಬಡ್ಡಿದರ ನಿಗದಿ ಮಾಡುತ್ತದೆ ಎಂಬುದರತ್ತ ಎಲ್ಲರ ಗಮನವಿದೆ.