ಮುಂಬೈ (ಸೆ. 25): ಎನ್‌ಕೌಂಟರ್ ಖ್ಯಾತಿಯ ಕರ್ನಾಟಕ ಪೊಲಿಸ್ ಅಧಿಕಾರಿ ದಯಾನಾಯಕ್ ಅವರನ್ನು ಮಂಗಳವಾರ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಕ್ಕೆ ವರ್ಗಾವಣೆ ಮಾಡಲಾಗಿದೆ. ದಯಾನಾಯಕ್ ಅವರು ಸದ್ಯ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದಯಾನಾಯಕ್ ಅವರು ಕರ್ನಾಟಕದ ಉಡುಪಿ ಮೂಲದವರಾಗಿದ್ದಾರೆ. 1995 ರಲ್ಲಿ ಅವರು ಮುಂಬೈ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು. 90 ರ ದಶಕದಲ್ಲಿ ಅವರು ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿಗಳಿಸಿದ್ದರು. ಮುಂಬೈ ಭೂಗಲೋಕದ 80ಕ್ಕೂ ಹೆಚ್ಚು ರೌಡಿಗಳನ್ನು ದಯಾನಾಯಕ್ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಮಹಾರಾಷ್ಟ್ರ ಸಂಘಟಿಕ ಅಪರಾಧಗಳ ತಡೆ ಕಾಯ್ದೆ ಅಡಿ ಅಕ್ರಮ ಆಸ್ತಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ದಯಾನಾಯಕ್ ಅವರನ್ನು 2006 ರಲ್ಲಿ ಅಮಾನತುಗೊಳಿಸಿತ್ತು. ಆದರೆ, ಅವರ ವಿರುದ್ಧ ಆರೋಪಗಳು ಸಾಬೀತಾಗದ ಹಿನ್ನೆಲೆಯಲ್ಲಿ 2015 ರಲ್ಲಿ ಅಮಾನತು ಶಿಕ್ಷೆ ರದ್ದುಗೊಳಿಸಲಾಗಿತ್ತು. 2016 ರಲ್ಲಿ ಮುಂಬೈ ಪೊಲೀಸ್ ಸೇವೆಗೆ ಮರಳಿದ್ದರು.