ಅಧಿಕಾರದಲ್ಲಿದ್ದ ಬಹುತೇಕ ರಾಜ್ಯಗಳನ್ನು ಕಳೆದುಕೊಂಡಿರುವ ಕಾಂಗ್ರೆಸ್‌ ಪಕ್ಷ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಗಂಭೀರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. 

ನವದೆಹಲಿ: ಅಧಿಕಾರದಲ್ಲಿದ್ದ ಬಹುತೇಕ ರಾಜ್ಯಗಳನ್ನು ಕಳೆದುಕೊಂಡಿರುವ ಕಾಂಗ್ರೆಸ್‌ ಪಕ್ಷ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಗಂಭೀರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ರಾಜ್ಯ ಕಚೇರಿಗಳ ದೈನಂದಿನ ವೆಚ್ಚಕ್ಕೆ ಹಣ ರವಾನಿಸುವುದನ್ನು ಐದು ತಿಂಗಳಿನಿಂದ ಸ್ಥಗಿತಗೊಳಿಸಿರುವ ಪಕ್ಷ, ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದೆಹಲಿ ನಾಯಕರು ವಿವಿಧ ರಾಜ್ಯಗಳಿಗೆ ತೆರಳಬೇಕಾದ ಸನ್ನಿವೇಶ ಸೃಷ್ಟಿಯಾದರೆ ಅವರಿಗೆ ವಿಮಾನ ಟಿಕೆಟ್‌ ಖರೀದಿಸಿ ಕೊಡುವುದಕ್ಕೂ ಪರದಾಡುತ್ತಿದೆ. ಪಕ್ಷದ ಕಚೇರಿಗೆ ಅತಿಥಿಗಳು ಬಂದರೆ ನೀಡಲಾಗುವ ಚಹಾಕ್ಕೂ ನಿರ್ಬಂಧ ಹೇರಿದೆ. ದೇಣಿಗೆ ಹೆಚ್ಚಿಸಬೇಕು ಹಾಗೂ ವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದು ಈಗಾಗಲೇ ತನ್ನ ಮುಖಂಡರಿಗೆ ಸೂಚನೆ ಕೊಟ್ಟಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನಾಯಕರು ತಿಳಿಸಿದ್ದಾರೆ ಎಂದು ಬ್ಲೂಂಬರ್ಗ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

2013ರಲ್ಲಿ ದೇಶದ 15 ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರ ನಡೆಸುತ್ತಿತ್ತು. ಅಲ್ಲದೆ ಕೇಂದ್ರದಲ್ಲೂ ಗದ್ದುಗೆಯಲ್ಲಿತ್ತು. ಹೀಗಾಗಿ ಸಂಪನ್ಮೂಲಕ್ಕೆ ಕೊರತೆ ಇರಲಿಲ್ಲ. ಬಿಜೆಪಿಯಲ್ಲಿ ನರೇಂದ್ರ ಮೋದಿ- ಅಮಿತ್‌ ಶಾ ಯುಗ ಆರಂಭವಾದ ಬಳಿಕ ಬಹುತೇಕ ರಾಜ್ಯಗಳನ್ನು ಕಳೆದುಕೊಂಡಿರುವ ಕಾಂಗ್ರೆಸ್‌ ಬಳಿ ಉಳಿದಿರುವುದು ಈಗ ಕೇವಲ ಎರಡು ದೊಡ್ಡ ರಾಜ್ಯಗಳು. ಸತತವಾಗಿ ಸೋಲುತ್ತಿರುವ ಹಿನ್ನೆಲೆಯಲ್ಲಿ ಉದ್ಯಮಿಗಳಿಂದ ಹರಿದುಬರುತ್ತಿದ್ದ ಸಂಪನ್ಮೂಲ ಸ್ಥಗಿತಗೊಂಡಿರುವುದು ಕಾಂಗ್ರೆಸ್ಸನ್ನು ಸಂಕಷ್ಟಕ್ಕೆ ದೂಡಿದೆ. ಹೀಗಾಗಿ ಸಮೂಹ ದೇಣಿಗೆ ಸಂಗ್ರಹ (ಕ್ರೌಡ್‌ ಫಂಡಿಂಗ್‌)ದಂತಹ ಕ್ರಮಗಳಿಗೆ ಕಾಂಗ್ರೆಸ್‌ ಮುಂದಾಗಿದೆ.

‘ನಮ್ಮ ಬಳಿ ಹಣವಿಲ್ಲ. ಚುನಾವಣಾ ಬಾಂಡ್‌ಗಳ ಮೂಲಕವೂ ನಮಗೆ ಹಣ ಹರಿದುಬರುತ್ತಿಲ್ಲ. ಹೀಗಾಗಿ ದೇಣಿಗೆ ಸಂಗ್ರಹಿಸಲು ಆನ್‌ಲೈನ್‌ ಕ್ರೌಡ್‌ ಫಂಡಿಂಗ್‌ ಮೊರೆ ಹೋಗಿದ್ದೇವೆ’ ಎಂದು ಕಾಂಗ್ರೆಸ್‌ ಸಾಮಾಜಿಕ ಜಾಲ ತಾಣ ವಿಭಾಗದ ಮುಖ್ಯಸ್ಥೆ ದಿವ್ಯ ಸ್ಪಂದನ (ರಮ್ಯಾ) ಹೇಳಿದ್ದಾರೆ.

2017ನೇ ಸಾಲಿನಲ್ಲಿ ಬಿಜೆಪಿಗೆ ಹರಿದುಬಂದ ನಾಲ್ಕನೇ ಒಂದು ಭಾಗದಷ್ಟುದೇಣಿಗೆ ಮಾತ್ರವೇ ಕಾಂಗ್ರೆಸ್‌ ಬೊಕ್ಕಸಕ್ಕೆ ಸೇರಿದೆ. ಆ ಅವಧಿಯಲ್ಲಿ ಬಿಜೆಪಿ ತನಗೆ 1034 ಕೋಟಿ ರು. ಆದಾಯ ಬಂದಿದೆ ಎಂದು ಘೋಷಿಸಿಕೊಂಡಿದ್ದರೆ, ತನ್ನ ಆದಾಯ 225 ಕೋಟಿ ರು. ಎಂದು ಸ್ವತಃ ಕಾಂಗ್ರೆಸ್‌ ಹೇಳಿದೆ.

ಈ ವರ್ಷಾರಂಭದಲ್ಲಿ ನಡೆದ ಈಶಾನ್ಯ ರಾಜ್ಯಗಳ ಚುನಾವಣೆ ಉಸ್ತುವಾರಿ ಹೊತ್ತುಕೊಂಡಿದ್ದ ನಾಯಕರು ಆ ರಾಜ್ಯಗಳಿಗೆ ತೆರಳಬೇಕಾದ ಸಂದರ್ಭದಲ್ಲಿ ವಿಮಾನ ಟಿಕೆಟ್‌ ಕೊಡಿಸಲು ಸಂಪನ್ಮೂಲ ಕೊರತೆಯಿಂದಾಗಿ ಕಾಂಗ್ರೆಸ್‌ ಪರದಾಡಿತ್ತು. ಪಕ್ಷಕ್ಕೆ ಕಾಡುತ್ತಿರುವ ತೀವ್ರ ಸಂಪನ್ಮೂಲ ಕೊರತೆಯಿಂದಾಗಿಯೇ ಕೆಲವೊಂದು ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯಲು ವಿಫಲವಾಗಿದೆ ಎಂದು ಹೇಳಲಾಗುತ್ತಿದೆ.