Asianet Suvarna News Asianet Suvarna News

'ಶೋಷಕ ಪುರುಷ ಅಧಿಕಾರಿಗಳೇ ಹುಷಾರ್'

ಮಹಿಳೆಯರು ಸಿಡಿದೆದ್ದರೆ ಶೋಷಣೆ ಮಾಡುವ ಪುರುಷ ಅಧಿಕಾರಿಗಳಿಗೆ ಉಳಿಗಾಲವಿಲ್ಲ. ಶೋಷಣೆ ಪ್ರವೃತ್ತಿಯ ಅಧಿಕಾರಿಗಳೇ ಇನ್ನಾದರೂ ಹುಷಾರಾಗಿರಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ಎಚ್ಚರಿಕೆ ನೀಡಿದ್ದಾರೆ.

Employers Organisation Inauguration in Bangalore

ಬೆಂಗಳೂರು (ಡಿ.28): ಮಹಿಳೆಯರು ಸಿಡಿದೆದ್ದರೆ ಶೋಷಣೆ ಮಾಡುವ ಪುರುಷ ಅಧಿಕಾರಿಗಳಿಗೆ ಉಳಿಗಾಲವಿಲ್ಲ. ಶೋಷಣೆ ಪ್ರವೃತ್ತಿಯ ಅಧಿಕಾರಿಗಳೇ ಇನ್ನಾದರೂ ಹುಷಾರಾಗಿರಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ಎಚ್ಚರಿಕೆ ನೀಡಿದ್ದಾರೆ.

ಕಬ್ಬನ್‌ಪಾರ್ಕಿನ ಎನ್‌ಜಿಒ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಅಧಿಕಾರಿಗಳ ಮತ್ತು ನೌಕರರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ತಾವು ಕೆಲಸ ಮಾಡುವ ಇಲಾಖೆಯನ್ನು ಕುಟುಂಬ ಎಂದೇ ಭಾವಿಸಿದ್ದಾರೆ. ಇದರಿಂದ ಪುರುಷ ಅಧಿಕಾರಿಗಳು ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗಿದೆ. ಈ ನಡುವೆಯೂ ಕೆಲ ಪುರುಷ ಅಧಿಕಾರಿಗಳು ಮಹಿಳಾ ಸಿಬ್ಬಂದಿಯನ್ನು ಶೋಷಿಸುವುದರಿಂದ ಇಡೀ ಅಧಿಕಾರಿ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ.

ಹಾಗಾಗಿ ಶೋಷಣೆ ಪ್ರವೃತ್ತಿ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಮುನ್ನಡೆಯಬೇಕಿದೆ ಎಂದರು. ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಮಾತನಾಡಿ, ರಾಜ್ಯದಲ್ಲಿ ಆರು ಲಕ್ಷ ಸರ್ಕಾರಿ ನೌಕರರಿದ್ದಾರೆ. ಬಜೆಟ್‌ನ ನಾಲ್ಕನೇ ಒಂದು ಭಾಗದ ಮೊತ್ತ ಈ ನೌಕರರಿಗೆ ಮೀಸಲಿದೆ. ಹಾಗಾಗಿ ಅಧಿಕಾರಿಗಳು ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು. ಕೇಂದ್ರದ ನಿರ್ಭಯಾ ಯೋಜನೆಯಡಿ ಸಾಕಷ್ಟು ಅನುದಾನ ಒದಗಿಸಲಾಗಿದೆ.

ದೇಶದಲ್ಲಿ ಕೇರಳ ಹೊರತುಪಡಿಸಿ ಕರ್ನಾಟಕವೂ ಸೇರಿದಂತೆ ಉಳಿದ ರಾಜ್ಯಗಳು ಅನುದಾನ ಪಡೆಯುವಲ್ಲಿ ಹಿಂದೆ ಉಳಿದಿವೆ ಎಂದು ಹೇಳಿದರು. ಇದೇ ವೇಳೆ ನಿವೃತ್ತ ಐಎಎಸ್ ಅಧಿಕಾರಿಗಳಾದ ಬಿ.ಆರ್. ಜಯರಾಮರಾಜೇ ಅರಸ್ ಹಾಗೂ ಗೋನಾಳ ಭೀಮಪ್ಪ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್, ಮೋಹನ್‌ಕುಮಾರ್ ಇದ್ದರು.

ನ್ಯಾಯ ದೊರೆತಿದ್ದರೆ ದೂರು ನೀಡುತ್ತಿರಲಿಲ್ಲ : ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷರೂ ಆಗಿರುವ ವಿ.ಎಸ್. ಉಗ್ರಪ್ಪ ಮಾತನಾಡುವಾಗ ಮಹಿಳಾ ಸಿಬ್ಬಂದಿ ಮೇಲಿನ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಮಿತಿ ಹೊರತುಪಡಿಸಿದರೆ ಇಲಾಖಾವಾರು ಸಮಿತಿಗಳು ರಚನೆಯಾಗಿಲ್ಲ. ಇದರಿಂದ ಅನೇಕ ದೂರು ತಮ್ಮ ಸಮಿತಿ ಮುಂದೆ ಬರುತ್ತಿವೆ ಎಂದು ಹೇಳಿದರು. ಇದಕ್ಕೆ ಉತ್ತರಿಸುವ ರೀತಿಯಲ್ಲಿ ಮಾತನಾಡಿದ ಸಚಿವೆ ಉಮಾಶ್ರೀ ಅವರು, ಒಂದು ವೇಳೆ ಈ ಸಮಿತಿಗಳಲ್ಲಿ ನ್ಯಾಯ ದೊರೆತಿದ್ದರೆ ಉಗ್ರಪ್ಪ ಅವರ ಸಮಿತಿ ಮುಂದೆ ದೂರುಗಳೇ ಬರುತ್ತಿರಲಿಲ್ಲ ಎಂದು ಪ್ರತ್ಯುತ್ತರಿಸಿದರು.

Follow Us:
Download App:
  • android
  • ios