ನವದೆಹಲಿ[ಜೂ.11]: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋವೊಂದು ಭಾರೀ ಶೇರ್ ಆಗುತ್ತಿದೆ. ಮೃತ ವ್ಯಕ್ತಿಯ ಅಂತಿಮ ಯಾತ್ರೆ ಹಲವಾರು ಬಾರಿ ನೋಡಿರುತ್ತೇವೆ. ಆದರೆ ವೈರಲ್ ಆದ ವಿಡಿಯೋದಲ್ಲಿ ಆನೆಗಳ ಹಿಂಡು ಮರಿಯಾನೆಯನ್ನು ಹೊತ್ತೊಯ್ಯುತ್ತಾ ಅಂತಿಮ ಯಾತ್ರೆ ನಡೆಸುತ್ತಿರುವ ದೃಶ್ಯ ಕಾಣಬಹುದಾಗಿದೆ. 

ಈ ವಿಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ ಪರ್ವೀನ್ ಕಾಸ್ವಾನ್ ಕೆಲ ದಿನಗಳ ಹಿಂದೆ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಆನೆಗಳ ಹಿಂಡು ಮೃತ ಮರಿಯಾನೆಯನ್ನು ಹೊತ್ತೊಯ್ಯುತ್ತಾ ಅರಣ್ಯ ವಲಯದಲ್ಲಿರುವ ರಸ್ತೆ ದಾಟುತ್ತಿರುವ ದೃಶ್ಯ ಕಾಣಬಹುದು. ಹೀಗಿರುವಾಗ ದೂರದಲ್ಲಿ ಹಲವಾರು ಮಂದಿ ಈ ದೃಶ್ಯ ನೋಡುತ್ತಾ ನಿಂತಿರುವುದನ್ನು ಕಾಣಬಹುದು.

ಈ ಘಟನೆಯ ಕುರಿತಾಗಿ ಬರೆದುಕೊಂಡಿರುವ ಅರಣ್ಯಾಧಿಕಾರಿ 'ಈ ದೃಶ್ಯ ನಿಮ್ಮನ್ನು ಭಾವುಕರನ್ನಾಗಿಸುತ್ತದೆ. ಅಳುತ್ತಿರುವ ಆನೆಗಳ ಹಿಂಡು ಸತ್ತ ಮರಿಯಾನೆಯ ಅಂತಿಮ ಯಾತ್ರೆ ಮಾಡಿದವು. ಕುಟುಂಬ ಮಗುವನ್ನು ಬಿಡಲಿಚ್ಛಿಸುತ್ತಿಲ್ಲ' ಎಂದಿದ್ದಾರೆ.

ಸತ್ತ ಆನೆಯ ಅಂತಿಮ ಕ್ರಿಯೆ ಎಲ್ಲಿ ನಡೆಸಲಾಯ್ತು ಎಂಬ ಮಾಹಿತಿ ಲಭ್ಯವಾಗಿಲ್ಲ.