"ನರೇಂದ್ರ ಮೋದಿಯವರು ರೈತರ ಜೊತೆ ಫೋಟೋ ಕ್ಲಿಕ್ಕಿಸುವುದನ್ನು ಎಂದಾದರೂ ನೋಡಿದ್ದೀರಾ? ಅವರ 15 ಲಕ್ಷದ ಬಟ್ಟೆ ಕೊಳೆಯಾಗುತ್ತದೆಂಬ ಆತಂಕದಿಂದ ಅವರು ನಿಮ್ಮ ಬಳಿಗೆ ಬರುವುದಿಲ್ಲ. ಆದರೆ, ಅಮೆರಿಕಕ್ಕೆ ಹೋಗಿ ಒಬಾಮರನ್ನು ಭೇಟಿಯಾಗುತ್ತಾರೆ"

ಅಜಮ್'ಗಡ್(ಸೆ. 11): ಕಾಂಗ್ರೆಸ್ ಪಾಲಿಗೆ ದುರ್ಬಲ ಕೋಟೆ ಎನಿಸಿರುವ ಉತ್ತರಪ್ರದೇಶದಲ್ಲಿ ರಾಹುಲ್ ಗಾಂಧಿ ರೈತರ ಸಭೆಗಳನ್ನು ಭರ್ಜರಿಯಾಗಿ ಮುಂದುವರಿಸಿದ್ದಾರೆ. ಆರನೇ ದಿನದ ರೈತ ಯಾತ್ರೆಯಲ್ಲಿ ಸಮಾಜವಾದಿ ಪಕ್ಷ, ಬಿಎಸ್'ಪಿ ಮತ್ತು ಬಿಜೆಪಿ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಯಥಾಪ್ರಕಾರ ನರೇಂದ್ರ ಮೋದಿ ವಿರುದ್ಧ ಸೂಟು ಬೂಟು ಟೀಕೆ ಮುಂದುವರಿಸಿದ್ದಾರೆ.

ಮೋದಿ ಬಗ್ಗೆ:
"ನರೇಂದ್ರ ಮೋದಿಯವರು ರೈತರ ಜೊತೆ ಫೋಟೋ ಕ್ಲಿಕ್ಕಿಸುವುದನ್ನು ಎಂದಾದರೂ ನೋಡಿದ್ದೀರಾ? ಅವರ 15 ಲಕ್ಷದ ಬಟ್ಟೆ ಕೊಳೆಯಾಗುತ್ತದೆಂಬ ಆತಂಕದಿಂದ ಅವರು ನಿಮ್ಮ ಬಳಿಗೆ ಬರುವುದಿಲ್ಲ. ಆದರೆ, ಅಮೆರಿಕಕ್ಕೆ ಹೋಗಿ ಒಬಾಮರನ್ನು ಭೇಟಿಯಾಗುತ್ತಾರೆ" ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

"ಪ್ರತಿಯೊಬ್ಬರ ಬ್ಯಾಂಕ್ ಅಕೌಂಟ್'ಗಳಿಗೂ 15 ಲಕ್ಷ ರೂ., ಯುವಕರಿಗೆ ಉದ್ಯೋಗ ಮತ್ತು ಬುಲೆಟ್ ರೈಲುಗಳ ಬಗ್ಗೆ ದೊಡ್ಡದೊಡ್ಡ ಭರವಸೆ ನೀಡಿದ್ದರು. ಜನತೆಗೆ ಯಾವಾಗ ಸಿಗುತ್ತದೆ 15 ಲಕ್ಷ? ಯುವಕರಿಗೆ ಯಾವಾಗ ಸಿಗುತ್ತೆ ಉದ್ಯೋಗ? ಯಾವಾಗ ಓಡುತ್ತವೆ ಬುಲೆಟ್ ರೈಲುಗಳು?" ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

"ಮೋದಿ ತಮ್ಮದೇ ಪ್ರಪಂಚದಲ್ಲಿ ಖುಷಿಯಾಗಿದ್ದಾರೆ. ಒಂದೆಡೆ, ಜನರು ತೊಂದರೆಯಲ್ಲಿದ್ದಾರೆ, ಇನ್ನೊಂದೆಡೆ ಮೋದಿಜೀ ಸಂತಸದಲ್ಲಿ ತೇಲುತ್ತಿದ್ದಾರೆ. ಅವರ ಗಮನವೆಲ್ಲವೂ ಅಮೆರಿಕ ಅಥವಾ ಜಪಾನ್ ಮೇಲೆಯೇ ಇರುತ್ತದೆ," ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ..

ಬಿಎಸ್'ಪಿ ಬಗ್ಗೆ: "ಆನೆ (ಬಿಎಸ್'ಪಿಯ ಚುನಾವಣಾ ಚಿಹ್ನೆ) ಎಲ್ಲಾ ಹಣವನ್ನೂ ನುಂಗಿಹಾಕಿತು. ನೀವು ಅದನ್ನು ಓಡಿಸಿದಿರಿ," ಎಂದು ಕು. ಮಾಯಾವತಿಯವರ ಬಹುಜನ ಸಮಾಜ ಪಕ್ಷದ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷರು ವಾಗ್ದಾಳಿ ನಡೆಸಿದ್ದಾರೆ.

ಎಸ್'ಪಿ ಬಗ್ಗೆ:
"ಆನೆಯನ್ನು ಓಡಿಸಿ ಸೈಕಲ್ ತಂದಿರಿ. ಈ ಸೈಕಲ್ಲು ಪಂಚರ್ ಆಗಿದೆಯೋ, ಅಥವಾ ಎಲ್ಲಿಯಾದರೂ ಸಿಕ್ಕಿಕೊಂಡಿದೆಯೋ ಗೊತ್ತಿಲ್ಲ. ಆದರೆ, ಚಲಿಸದೇ ನಿಂತುಬಿಟ್ಟಿದೆ. ಈ ಸಮಾಜವಾದಿ ಪಕ್ಷ ನಿಮಗೆ ರೇಷನ್ ಕಾರ್ಡ್ ಕೊಡಲು ವಿಫಲವಾಗಿದೆ," ಎಂದು ಹಾಲಿ ಅಧಿಕಾರದಲ್ಲಿರುವ ಸಮಾಜವಾದಿ ಪಕ್ಷವನ್ನು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.

"ನೀವೀಗ ಕೈಹಿಡಿಯುವ ಕಾಲ ಬಂದಿದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ, ರೇಷನ್ ಕಾರ್ಡ್ ಮತ್ತು ರೈತರ ಬಗ್ಗೆ ಏನೇನು ಮಾಡುತ್ತೀವಿ ನೋಡ್ತೀರಿ," ಎಂದು ಗಾಂಧಿ ಭರವಸೆ ನೀಡಿದ್ದಾರೆ.

ರಾಹುಲ್ ಗಾಂಧಿ 2,500 ಕಿಮೀ ದೂರದ ದೇವೋರಿಯಾ ಟೂ ಡೆಲ್ಲಿ ರೈತ ಯಾತ್ರೆ ನಡೆಸುತ್ತಿದ್ದು, ಇಂದು ಅದರ ಆರನೇ ದಿನವಾಗಿದೆ.

(ಮಾಹಿತಿ: ಪಿಟಿಐ ಸುದ್ದಿಸಂಸ್ಥೆ)