ಶ್ರೀನಗರ[ಮಾ.11]: ಪುಲ್ವಾಮಾದಲ್ಲಿ 40 ಸಿಆರ್‌ಪಿಎಫ್‌ ಯೋಧರನ್ನು ಹತ್ಯೆಗೈದ ಭೀಕರ ಆತ್ಮಹತ್ಯಾ ದಾಳಿಯ ಮೆದುಳು 23 ವರ್ಷದ ಎಲೆಕ್ಟ್ರೀಶಿಯನ್‌ ಎಂಬ ಸಂಗತಿ ಬೆಳಕಿಗೆ ಬಂದಿದೆ. ದಾಳಿ ನಡೆಸಿದ ಬಾಂಬರ್‌ಗೆ ಕಾರು ಹಾಗೂ ಸ್ಫೋಟಕಗಳನ್ನು ನೀಡಿದ್ದು ಕೂಡ ಇವನೇ ಎಂದೂ ತಿಳಿದುಬಂದಿದೆ.

ಫೆ.14ರಂದು ಜಮ್ಮು ಕಾಶ್ಮೀರದಲ್ಲಿ ನಡೆದ ದಾಳಿಯ ತನಿಖೆ ನಡೆಸುತ್ತಿರುವ ಎನ್‌ಐಎ ಮೂಲಗಳು ಈ ಮಾಹಿತಿ ನೀಡಿದ್ದು, ಜೈಷ್‌ ಎ ಮೊಹಮ್ಮದ್‌ ಭಯೋತ್ಪಾದಕ ಸಂಘಟನೆಯಲ್ಲಿ ಅಷ್ಟೇನೂ ಪರಿಚಿತನಲ್ಲದ ಮುದಾಸಿರ್‌ ಅಹ್ಮದ್‌ ಖಾನ್‌ ಅಲಿಯಾಸ್‌ ಮೊಹಮ್ಮದ್‌ ಭಾಯಿ ಈ ಕೃತ್ಯದ ಸಂಚು ರೂಪಿಸಿದವನು ಎಂದು ತಿಳಿಸಿವೆ.

ದಾಳಿ ನಡೆಸಿದ ಅಹಮ್ಮದ್‌ ಅದಿಲ್‌ ದಾರ್‌ಗೆ ಮಾರುತಿ ಇಕೋ ಮಿನಿವ್ಯಾನ್‌ ಹಾಗೂ ಭಾರಿ ಪ್ರಮಾಣದ ಸ್ಫೋಟಕಗಳನ್ನು ಕೂಡ ಈತನೇ ಕೊಡಿಸಿದ್ದ. ಇವನು ಪುಲ್ವಾಮಾ ಜಿಲ್ಲೆಯ ತ್ರಾಲ್‌ನಲ್ಲಿರುವ ಮೀರ್‌ ಮೊಹಲ್ಲಾದ ನಿವಾಸಿಯಾಗಿದ್ದು, ಪದವಿ ಶಿಕ್ಷಣ ಹಾಗೂ ನಂತರ ಒಂದು ವರ್ಷದ ಎಲೆಕ್ಟ್ರಿಕಲ್‌ ಡಿಪ್ಲೊಮಾ ಪಡೆದು 2017ರಲ್ಲಿ ಜೈಷ್‌ ಸಂಘಟನೆಗೆ ಸೇರಿದ್ದ. ಈತನ ತಂದೆ ಕೂಲಿ ಕಾರ್ಮಿಕ. ದಾಳಿ ನಡೆಸಿದ ಆತ್ಮಹತ್ಯಾ ಬಾಂಬರ್‌ ಅದಿಲ್‌ ದಾರ್‌ ಈತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಂದು ಮೂಲಗಳು ಹೇಳಿವೆ.

2018ರ ಜನವರಿಯಲ್ಲಿ ಜಮ್ಮು ಕಾಶ್ಮೀರದ ಲೆತ್‌ಪೋರಾದಲ್ಲಿ ಸಿಆರ್‌ಪಿಎಫ್‌ ಕ್ಯಾಂಪ್‌ ಮೇಲೆ ನಡೆದ ದಾಳಿಯಲ್ಲೂ ಮೊಹಮ್ಮದ್‌ ಭಾಯಿ ಪಾಲ್ಗೊಂಡಿದ್ದ ಎಂದು ಹೇಳಲಾಗಿದೆ. ಆ ದಾಳಿಯಲ್ಲಿ 5 ಯೋಧರು ಮೃತಪಟ್ಟಿದ್ದರು.