ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಪುತ್ರನನ್ನು ಸೋಲಿಸಲು ಎಲ್ಲ ತಯಾರಿ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಬೆಂಗಳೂರು : ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಪುತ್ರನನ್ನು ಸೋಲಿಸಲು ಎಲ್ಲ ತಯಾರಿ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಗುರುವಾರ ಯಲಹಂಕದ ರೆಸಾರ್ಟ್‌ ಬಳಿ ಪಕ್ಷದ ಜಿಲ್ಲಾವಾರು ಮುಖಂಡರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲೂ ಬಿಜೆಪಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಜೆಡಿಎಸ್‌ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಎಲ್ಲ ಪ್ರಯತ್ನಗಳನ್ನೂ ನಡೆಸಲಾಗುತ್ತಿದೆ. ಇದೇ ತಿಂಗಳ 9ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ರಾಜ್ಯದಲ್ಲೇ ಬಂದು ತಯಾರಿ ಆರಂಭಿಸಲಿದ್ದಾರೆ. ಈಗಾಗಲೆ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಪರಿಶೀಲನೆ ನಡೆಸಲಾಗಿದೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈ ತಿಂಗಳ 9ರೊಳಗಾಗಿ ಇನ್ನೂ ಮೂರ್ನಾಲ್ಕು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಪಕ್ಷಕ್ಕೆ ಗೆಲ್ಲಲು ಸಾಧ್ಯವಿಲ್ಲದ ಹಾಗೂ ಸಂಘಟನೆ ದುರ್ಬಲವಾಗಿರುವ ಕ್ಷೇತ್ರಗಳಲ್ಲಿ ಮಾತ್ರ ಅನ್ಯ ಪಕ್ಷದವರನ್ನು ಕರೆದುಕೊಳ್ಳಲಾಗುವುದು ಎಂದು ತಿಳಿಸಿದರು.