ಬೆಂಗಳೂರಿಗೆ ಇಂದು ಮುಖ್ಯ ಚುನಾವಣಾ ಆಯುಕ್ತರ ತಂಡ

First Published 4, Apr 2018, 8:43 AM IST
Election Commission Delegation to visit Bengaluru
Highlights

ರಾಜ್ಯ ವಿಧಾನಸಭೆ ಚುನಾವಣೆಯ ಪೂರ್ವಸಿದ್ಧತೆ ಪರಿಶೀಲನೆಗಾಗಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್‌ ನೇತೃತ್ವದ ತಂಡವು ಬುಧವಾರ ನಗರಕ್ಕೆ ಆಗಮಿಸಲಿದ್ದು, ಮೂರು ದಿನಗಳ ಪರಿಶೀಲನೆ ನಡೆಸಲಿದೆ.

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಯ ಪೂರ್ವಸಿದ್ಧತೆ ಪರಿಶೀಲನೆಗಾಗಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್‌ ನೇತೃತ್ವದ ತಂಡವು ಬುಧವಾರ ನಗರಕ್ಕೆ ಆಗಮಿಸಲಿದ್ದು, ಮೂರು ದಿನಗಳ ಪರಿಶೀಲನೆ ನಡೆಸಲಿದೆ.

ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್‌ ರಾವತ್‌ ಅವರೊಂದಿಗೆ ಚುನಾವಣಾ ಆಯುಕ್ತರಾದ ಸುನೀಲ್‌ ಅರೋರಾ, ಅಶೋಕ್‌ ಲವಾಸ ಆಗಮಿಸಲಿದ್ದಾರೆ. ಬುಧವಾರದಿಂದ ಏ.6ರವರೆಗೆ ನಗರದಲ್ಲಿದ್ದು, ಚುನಾವಣಾ ಪೂರ್ವಸಿದ್ಧತೆ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಕ್ರೋಢೀಕರಿಸಲಿದ್ದಾರೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಎಲ್ಲಾ 224 ಕ್ಷೇತ್ರಗಳಿಗೆ ಚುನಾವಣೆ ನಡೆಸಲು ವೇಳಾಪಟ್ಟಿಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳ ಗುರುತಿಸುವಿಕೆ, ಚುನಾವಣಾ ಭದ್ರತೆ, ನೀತಿ ಸಂಹಿತೆ ಪಾಲನೆ ಸೇರಿದಂತೆ ಇತರೆ ವಿಷಯಗಳ ಕುರಿತು ಪರಾಮರ್ಶೆ ನಡೆಸಲಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್‌ ಮಹಾ ನಿರ್ದೇಶಕರು ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಅವರು ಸಭೆಗಳನ್ನು ನಡೆಸಲಿದ್ದಾರೆ. ಕಾನೂನು ಸುವ್ಯವಸ್ಥೆ ಸೇರಿದಂತೆ ಅಕ್ರಮಗಳ ತಡೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ.

ಅಲ್ಲದೇ, ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೂ ಸಹ ಸಭೆ ನಡೆಸಲಿದ್ದು, ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದಾರೆ. ಕೊನೆಯ ದಿನ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡಲಿದ್ದಾರೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

loader