ಲಕ್ನೋ[ಜು.09]: ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಬೆಚ್ಚಿ ಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ವೃದ್ಧ ದಂಪತಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡುತ್ತಾ 'ನಮ್ಮ ಮಗ ಹಾಗೂ ಸೊಸೆಯ ಟಾರ್ಚರ್ ತಡೆಯಲಾಗುತ್ತಿಲ್ಲ, ದಯವಿಟ್ಟು ನಮ್ಮ ಕಾಪಾಡಿ' ಎಂದು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. 

ಮಗ ಹಾಗೂ ಸೊಸೆಯ ಕಿರುಕುಳದಿಂದ ಬೇಸತ್ತ ಇಂದ್ರಜಿತ್ ಹಾಗೂ ಪುಷ್ಪಾ ಗ್ರೋವರ್ ಹೆಸರಿನ ವೃದ್ಧ ದಂಪತಿ ವಿಡಿಯೋ ಮೂಲಕ ಈ ವಿಚಾರವನ್ನು ಬಹಿರಂಗೊಪಡಿಸಿದ್ದಾರೆ. ಕಣ್ಣೀರು ಹರಿಸುತ್ತಾ ತಮ್ಮನ್ನು ಕಾಪಾಡುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.

'ನಮ್ಮ ಮಗ ಹಾಗೂ ಸೊಸೆ, ನಮ್ಮನ್ನು ಮನೆಯಿಂದ ಹೊರ ಹಾಕಲು ನಿರ್ಧರಿಸಿದ್ದಾರೆ. ಇದೇ ಕಾರಣದಿಂದ ನಿರಂತರ ಕಿರುಕುಳ ನೀಡುತ್ತಾರೆ. ನಾವು ಬೆವರು ಹರಿಸಿ ಒಗ್ಗೂಡಿಸಿದ ಹಣದಿಂದ ಈ ಮನೆಯನ್ನು ನಿರ್ಮಿಸಿದ್ದೇವೆ. ಈಗ ನಮ್ಮನ್ನೇ ಮನೆಯಿಂದ ಹೊರಹೋಗಿ ಎನ್ನುತ್ತಿದ್ದಾರೆ. ಆದರೆ ಈ ವಯಸ್ಸಲ್ಲಿ ನಾವು ಎಲ್ಲಿ ಹೋಗುವುದು?' ಎಂದು ತಮ್ಮ ಅಳಲನ್ನು ಹೊರ ಹಾಕಿದ್ದಾರೆ.

ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವೃದ್ಧ ದಂಪತಿ ಹಾಗೂ ಅವರ ಮಗನ ನಡುವಿನ ಸಮಸ್ಯೆಯನ್ನು ಬಗೆ ಹರಿಸಿದ್ದಾರೆ. ವೃದ್ಧ ದಂಪತಿಯ ಮಗ ಅಭಿಷೇಕ್ ಗ್ರೋವರ್ ನನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು 'ಇನ್ಮುಂದೆ ತಾನು ತಂದೆ, ತಾಯಿಯ ಇಚ್ಛಾನುಸಾರ ಮನೆ ಬಾಡಿಗೆ ನೀಡಿ ಕುಟುಂಬದೊಂದಿಗೆ ಇರುತ್ತೇನೆ. ಅಲ್ಲದೇ ಮುಂದಿನ 10 ದಿನಗಳೊಳಗೆ ಮನೆಯನ್ನು ಖಾಲಿ ಮಾಡುತ್ತೇನೆ' ಎಂದು ಲಿಖಿತ ರೂಪದಲ್ಲಿ ಬರೆಸಿಕೊಂಡಿದ್ದಾರೆ.