-ಕಾವೇರಿ ಎಸ್.ಎಸ್,

ಬೆಂಗಳೂರು(ಸೆ.20): ದ್ವಿದಳ ಧಾನ್ಯಗಳ ಬೆಲೆಯಲ್ಲಿ ಏರಿಕೆ, ನೀರಿನ ಅಭಾವ, ಅಧಿಕ ಉತ್ಪಾದನಾ ವೆಚ್ಚ ಹೀಗೆ ಅನೇಕ ಕಾರಣಗಳಿಂದ ಮೊಟ್ಟೆ ಬೆಲೆ ದಿಢೀರ್ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಮೊಟ್ಟೆ ಚಿಲ್ಲರೆ ಬೆಲೆಯಲ್ಲಿ ದಿಢೀರನೆ ರೂ. 1 ಏರಿಕೆಯಾಗಿದೆ.

ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೋಳಿಮೊಟ್ಟೆ ಬಳಸುವ ಬೆಂಗಳೂರು ನಗರಕ್ಕೆ ನಿತ್ಯ ೬೦ ಲಕ್ಷ ಮೊಟ್ಟೆ ಅಗತ್ಯವಿದೆ. ತಮಿಳುನಾಡಿನ ನಾಮಕ್ಕಲ್‌ನಿಂದ 20 ಲಕ್ಷ ಮೊಟ್ಟೆ, ಹೊಸಪೇಟೆಯಿಂದ 5ರಿಂದ 6 ಲಕ್ಷ, ದಾವಣಗೆರೆ 2ರಿಂದ 3 ಲಕ್ಷ ಮೊಟ್ಟೆಗಳು ನಿತ್ಯ ನಗರಕ್ಕೆ ಪೂರೈಕೆಯಾಗುತ್ತವೆ. ಬೆಂಗಳೂರು ಸುತ್ತಮುತ್ತ ಪ್ರದೇಶದಿಂದಲೇ ನಿತ್ಯ 22 ಲಕ್ಷ ಮೊಟ್ಟೆ ಪೂರೈಕೆಯಾಗುತ್ತದೆ.

ದಿಢೀರ್ ಬೆಲೆ ಏರಿಕೆ

ಸಾಮಾನ್ಯವಾಗಿ ಮಳೆಗಾಲ ಹಾಗೂ ಚಳಿಗಾಲದಲ್ಲಿ ಮೊಟ್ಟೆ ಬಳಕೆ ಹೆಚ್ಚು. ಆದರೆ ಬೆಲೆ ಸಾಧಾರಣ ಮಟ್ಟದಲ್ಲೇ ಇರುತ್ತದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಸಗಟು ಮೊಟ್ಟೆ ಬೆಲೆ ರೂ. 3.35ಪೈಸೆ . ಆದರೆ ನಂತರ ದಿನಗಳಲ್ಲಿ ಏರಿಕೆಯಾಗಿ ಸೋಮವಾರಕ್ಕೆ (ಸೆ. 19) 1 ಮೊಟ್ಟೆ ಸಗಟು ಬೆಲೆ ರೂ. 3.90 ಪೈಸೆಗೆ ಹೆಚ್ಚಳವಾಗಿದೆ. ಸಗಟು ದರದಲ್ಲೇ 55 ಪೈಸೆ ಹೆಚ್ಚಳವಾಗಿರುವುದರಿಂದ ಚಿಲ್ಲರೆ ಮಾರಾಟ ದರ ರೂ. 1 ಏರಿಕೆಯಾಗಿದೆ. ಹಾಗಾಗಿ ದಿನಸಿ ಅಂಗಡಿಗಳಲ್ಲಿ ಮೊಟ್ಟೆ ದರ ಸದ್ಯ ರೂ.4ರಿಂದ ರೂ 5 ಆಗಿದೆ.

ಕೋಳಿ ಆಹಾರದ ಬೆಲೆ ಹೆಚ್ಚಳ ಎಫೆಕ್ಟ್

ಕೋಳಿ ಆಹಾರವಾದ ಮುಸುಗಿನ ಜೋಳ, ಇಂಡಿ, ಸೋಯಾಬೀನ್, ರಾಗಿ, ಅಕ್ಕಿನುಚ್ಚಿನ ಬೆಲೆ ಏರಿಕೆಯೂ ಮೊಟ್ಟೆ ದರ ಏರಿಕೆಗೆ ಕಾರಣ. ಅಲ್ಲದೇ ಕೋಳಿ ಸಾಕಾಣೆ ಹಾಗೂ ನಿರ್ವಹಣೆ, ಮೊಟ್ಟೆ ಸಾಗಣೆ ವೆಚ್ಚವೂ ದುಬಾರಿಯಾಗಿರುವುದರಿಂದ ಬೆಲೆ ಹೆಚ್ಚಾಗಿದೆ. ಮೊಟ್ಟೆ ಧಾರಣೆ ಮುಂದಿನ ದಿನಗಳಲ್ಲಿ ಮತ್ತಷ್ಟು ಏರುವ ಸಂಭವವಿದೆ ಎನ್ನುತ್ತಾರೆ ಕುಕ್ಕುಟೋದ್ಯಮಿಗಳು.

ಬೆಲೆ ಏರಿಕೆಗೆ ಕಾರಣಗಳೇನು?

ರಾಜ್ಯದಲ್ಲಿ ಬೆಳೆಯುವ ಮುಸುಕಿನ ಜೋಳದಲ್ಲಿ ದೊಡ್ಡ ಪಾಲು ಕೋಳಿ ಮೇವಿಗೆ ಬಳಕೆಯಾಗುತ್ತದೆ. ಈ ಬಾರಿ ಮಳೆಯ ಅಭಾವವೂ ಮೇವು ಕೊರತೆ ಉಂಟಾಗಿದೆ. ಜತೆಗೆ, ಕೋಳಿ ಉದ್ಯಮಕ್ಕೆ ಅಗತ್ಯವಿದ್ದಷ್ಟು ನೀರು ಲಭ್ಯವಾಗುತ್ತಿಲ್ಲ. ಒಂದು ಕೋಳಿಯ ನಿರ್ವಹಣೆಗೆ ದಿನಕ್ಕೆ 250 ಎಂಎಲ್ ನೀರು ಬೇಕು. ನೀರಿನ ಕೊರತೆ ನೀಗಿಸಲು ಕುಕ್ಕುಟೋದ್ಯಮಿಗಳು ನಿತ್ಯ ಟ್ಯಾಂಕರ್ ನೀರು ಬಳಸುತ್ತಿದ್ದು, ನೀರಿಗಾಗಿಯೇ ರೂ. 1400 ವರೆಗೂ ಹಣ ತೆರುವಂತಾಗಿದೆ. ಹಾಗಾಗಿ ಮೊಟ್ಟೆ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ ಎನ್ನುತ್ತಾರೆ ಉದ್ಯಮಿ ಎನ್‌ಇಸಿಸಿ (ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ) ಅಧ್ಯಕ್ಷ ಸಾಯಿನಾಥ್.

ವಹಿವಾಟಿಗೆ ಅಡ್ಡಿಯಾಗದ ವಿವಾದ

ಕಾವೇರಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ತಮಿಳುನಾಡಿನ ನಡುವೆ ಬಿಗುವಿನ ವಾತಾವರಣವಿದೆ.ಆದರೆ, ತಮಿಳುನಾಡಿನ ನಾಮಕ್ಕಲ್ ಸೇರಿದಂತೆ ಇತರೆಡೆಯಿಂದ ಪ್ರತಿದಿನದಂತೆ ಮೊಟ್ಟೆ ಪೂರೈಕೆಯಾಗುತ್ತಿದೆ.

ಜೋಳ ಸೇರಿದಂತೆ ದ್ವಿದಳ ಧಾನ್ಯಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಜತೆಗೆ ಇತರೆ ನಿರ್ವಹಣಾ ವೆಚ್ಚವೂ ಅಧಿಕವಾಗಿರುವುದರಿಂದ ಬೆಲೆ ಏರಿಕೆ ಅನಿವಾರ್ಯ. ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಮೊಟ್ಟೆ ಬೆಲೆ ಏರಿಕೆಯಾಗಿದೆ.

-ಬಿ.ಆರ್. ಸಾಯಿನಾಥ್, ಎನ್‌ಇಸಿಸಿ ಬೆಂಗಳೂರು ವಲಯದ ಅಧ್ಯಕ್ಷ