ದಾಖಲೆಗಳಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ಈ ಕಂಪನಿಗಳು ವಾಸ್ತವದಲ್ಲಿ ಯಾವುದೇ ವ್ಯವಹಾರ ನಡೆಸುವುದಿಲ್ಲ. ಇಂಥ ಕಂಪನಿಗಳ ಹೆಸರಿನಲ್ಲಿ ಅಕ್ರಮ ಹಣದ ವಹಿವಾಟು ನಡೆಸಲಾಗುತ್ತದೆ.
ನವದೆಹಲಿ(ಏ. 01): ಹಣ ಅವ್ಯವಹಾರ ನಡೆಸುವ ಶೆಲ್ ಕಂಪನಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಪ್ರಧಾನಿ ಕಾರ್ಯಾಲಯ ಆದೇಶ ನೀಡಿರುವ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಕಾರ್ಯಪ್ರವೃತ್ತವಾಗಿದೆ. ಬೆಂಗಳೂರು ಸೇರಿದಂತೆ ದೇಶಾದ್ಯಂತ 100 ಸ್ಥಳಗಳಲ್ಲಿ ಸುಮಾರು 300 ಬೇನಾಮಿ ಕಂಪನಿಗಳ ಮೇಲೆ ಇಡಿ ಇಂದು ಏಕಕಾಲದಲ್ಲಿ ದಾಳಿ ನಡೆಸಿದೆ. ಆದರೆ, ನೋಟ್ ಬ್ಯಾನ್ ಆದ ಬಳಿಕ ಅನುಮಾನಾಸ್ಪದ ಹಣ ವಿಲೇವಾರಿ ನಡೆಸಿದ ಕಂಪನಿಗಳನ್ನ ಸದ್ಯ ಟಾರ್ಗೆಟ್ ಮಾಡಲಾಗಿದೆಯಾ ಎಂಬುದು ಗೊತ್ತಿಲ್ಲ. ಆದರೆ, ಸರಕಾರದ ಬಳಿ 1 ಸಾವಿರಕ್ಕೂ ಹೆಚ್ಚು ಶೆಲ್ ಕಂಪನಿಗಳ ಪಟ್ಟಿ ಇದ್ದು, ಮುಂದಿನ ದಿನಗಳಲ್ಲಿ ಇವೆಲ್ಲವುಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಏನಿವು ಶೆಲ್ ಕಂಪನಿಗಳು?
ಶೆಲ್ ಕಂಪನಿಗಳೆಂದರೆ ನಾಮಕಾವಸ್ತೆಯಾಗಿ ಸೃಷ್ಟಿಯಾಗಿರುವ ಸಂಸ್ಥೆಗಳಾಗಿರುತ್ತವೆ. ದಾಖಲೆಗಳಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ಈ ಕಂಪನಿಗಳು ವಾಸ್ತವದಲ್ಲಿ ಯಾವುದೇ ವ್ಯವಹಾರ ನಡೆಸುವುದಿಲ್ಲ. ಇಂಥ ಕಂಪನಿಗಳ ಹೆಸರಿನಲ್ಲಿ ಅಕ್ರಮ ಹಣದ ವಹಿವಾಟು ನಡೆಸಲಾಗುತ್ತದೆ.
ಕಳೆದ 3 ವರ್ಷಗಳಲ್ಲಿ ಸರಕಾರವು ಇಂಥ 1,155 ಬೇನಾಮಿ ಕಂಪನಿಗಳನ್ನು ಗುರುತಿಸಿ ಪಟ್ಟಿ ಮಾಡಿಟ್ಟುಕೊಂಡಿದೆ. 22 ಸಾವಿರ ಜನರು ತಮ್ಮ ಅಕ್ರಮ ವ್ಯವಹಾರಕ್ಕೆ ಇಂಥ ಕಂಪನಿಗಳನ್ನು ಬಳಸಿದ್ದಾರೆನ್ನಲಾಗಿದೆ. ಸರಕಾರದ ಒಂದು ಅಂದಾಜಿನ ಪ್ರಕಾರ ಪಟ್ಟಿಯಲ್ಲಿರುವ ಶೆಲ್ ಕಂಪನಿಗಳು 13 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣದ ಅವ್ಯವಹಾರ ನಡೆಸಿವೆಯಂತೆ.
