ನವದೆಹಲಿ(ಆ.15): ತಮ್ಮ ನಾಲ್ಕು ಕಿರಿಯ ಸಹಯೋಗಿ ನ್ಯಾಯಾಧೀಶರು ತಮ್ಮ ವಿರುದ್ಧವೇ ಬಹಿರಂಗವಾಗಿ ಬಂಡೆದ್ದ ಪ್ರಕರಣದ ಬಗ್ಗೆ ಇದೇ ಮೊದಲ ಬಾರಿ ಮೌನ ಮುರಿದಿರುವ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ, ಯಾವುದೇ ವ್ಯವಸ್ಥೆಯನ್ನು ನಾಶಗೊಳಿಸುವುದು ಬಹು ಸುಲಭ, ಆದರೆ ಅದೇ ವ್ಯವಸ್ಥೆಯನ್ನು ಸುಧಾರಣೆ ಮಾಡಿ ಅದು ಕಾರ್ಯನಿರ್ವಹಿಸುವಂತೆ ಮಾಡುವುದು ಅತ್ಯಂತ ಕಷ್ಟಕರವಾದುದು ಮತ್ತು ಸವಾಲಿನದ್ದು ಎಂದು ಹೇಳಿದ್ದಾರೆ. 

ಬುಧವಾರ ಸುಪ್ರೀಂಕೋರ್ಟ್ ಆವರಣ ದಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಮಾಡಿ ಮಾತನಾಡಿದ ನ್ಯಾ. ಮಿಶ್ರಾ, ಸಕಾರಾತ್ಮಕ ಮತ್ತು ಸುಭದ್ರ ಸುಧಾರಣೆಗಳನ್ನು ಹೊಣೆಗಾರಿಕೆಯಿಂದ ನಿರ್ವಹಿಸಬೇಕು. ವೈಯಕ್ತಿಕ ಆಸೆ ಮತ್ತು ಕೊರಗನ್ನು ಬದಿಗೊತ್ತಿ ವ್ಯವಸ್ಥೆಯ ಸುಧಾರಣೆಗಾಗಿ ಯತ್ನಿಸಬೇಕು ಎನ್ನುವ ಮೂಲಕ, ಸುಪ್ರೀಂಕೋರ್ಟ್‌ನ ನಾಲ್ವರು ಜಡ್ಜ್‌ಗಳ ತಮ್ಮ ವಿರುದ್ಧ ಮಾಡಿದ ಆರೋಪಗಳು, ಕೇವಲ ವೈಯಕ್ತಿಕ ಆಸೆ ಈಡೇರಿಸಿಕೊಳ್ಳಲು ಮಾಡಿದ ಯತ್ನ ಎಂದು ಟಾಂಗ್ ನೀಡಿದರು. 

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನ ನಾಲ್ವರು ಜಡ್ಜ್‌ಗಳು ನ್ಯಾಯಾಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಬಹಿರಂಗ ಪತ್ರಿಕಾಗೋಷ್ಠಿ ಕರೆದು, ದೇಶದ ನ್ಯಾಯಾಂಗ ವ್ಯವಸ್ಥೆ
ಅಪಾಯದಲ್ಲಿದೆ ಎನ್ನುವ ಮೂಲಕ ಸಿಜೆಐ ದೀಪಕ್ ಮಿಶ್ರಾ ವಿರುದ್ಧ ಸಿಡಿದೆದ್ದಿದ್ದರು.