ತುಮಕೂರು[ಜೂ.15] :  ಬೆಂಗಳೂರಿನ ಐಎಂಎ ಜ್ಯುವೆಲ್ಸ್‌ ಹಗರಣ ಬಯಲಾದ ಬೆನ್ನಲ್ಲೇ ತುಮಕೂರಿನಲ್ಲೂ ಇದೇ ರೀತಿ ಸಾರ್ವಜನಿಕರಿಗೆ ನೂರಾರು ಕೋಟಿ ವಂಚಿಸಿರುವ ಪ್ರಕರಣವೊಂದು ಶುಕ್ರವಾರ ಬೆಳಕಿಗೆ ಬಂದಿದೆ. ‘ಈಝಿ ಮೈಂಡ್‌ ಮಾರ್ಕೆಟಿಂಗ್‌ ಲಿಮಿಟೆಡ್‌’ ಸಂಸ್ಥೆ ರಾಜ್ಯ, ಹೊರರಾಜ್ಯಗಳ 600ಕ್ಕೂ ಹೆಚ್ಚು ಮಂದಿಗೆ ನೂರಾರು ಕೋಟಿಗೂ ಹೆಚ್ಚು ಪಂಗನಾಮ ಹಾಕಿದೆ.

"

ನಗರದ ಶಾದಿ ಮಹಲ್‌ ಬಳಿ ಇರುವ ಈಝಿ ಮೈಂಡ್‌ ಮಾರ್ಕೆಟಿಂಗ್‌ ಲಿಮಿಟೆಡ್‌ ಎಂಬ ಸಂಸ್ಥೆ ಊಬರ್‌ ಮತ್ತು ಓಲಾ ಹಾಗೂ ಪೌಲ್ಟ್ರಿ ಫಾರಂಗಳಲ್ಲಿ ಹಣ ತೊಡಗಿಸಿ ಪ್ರತಿ ತಿಂಗಳು ಆದಾಯ ನೀಡುವ ಭರವಸೆ ನೀಡಿ ಸಾರ್ವಜನಿಕರಿಂದ ಭಾರೀ ಮೊತ್ತದ ಹಣ ಸಂಗ್ರಹಿಸಿತ್ತು. ಈ ಸಂಬಂಧ ಹೂಡಿಕೆದಾರರಿಗೆ ಬಾಂಡ್‌ ಕೂಡ ನೀಡಿತ್ತು. ವಿಪರಾರ‍ಯಸವೆಂದರೆ ಐಎಂಎನಂತೆ ಇಲ್ಲೂ ಮುಸ್ಲಿಂ ಸಮುದಾಯದವರನ್ನೇ ಗುರಿಯಾಗಿರಿಸಿಕೊಂಡು ಈ ವಂಚನೆ ಎಸಗಲಾಗಿದೆ. ತುಮಕೂರಿನವನೇ ಆದ ಮಹಮ್ಮದ್‌ ಅಸ್ಲಂ ಎಂಬಾತ ಈ ವಂಚನೆ ಎಸಗಿದ್ದಾನೆ.

ಅಧಿಕ ಲಾಭಾಂಶದ ಆಮಿಷ: 2017ರಿಂದ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಆರಂಭಿಸಿದ ಈ ಸಂಸ್ಥೆ ಪ್ರತಿ ತಿಂಗಳು ಶೇ.7ರಷ್ಟು ಲಾಭಾಂಶವನ್ನು ಕಳೆದ ನವೆಂಬರ್‌ವರೆಗೂ ನಿಯಮಿತವಾಗಿ ನೀಡುತ್ತಾ ಬಂದಿತ್ತು. ಇದನ್ನು ನಂಬಿ ಗ್ರಾಹಕರು ಹೆಚ್ಚಿನ ಹಣವನ್ನು ಸಂಸ್ಥೆಯಲ್ಲಿ ಹೂಡಿದ್ದರು. ಕಂಪನಿಯಲ್ಲಿ ಹೂಡಿಕೆ ಮಾಡಿದ್ದಕ್ಕೆ ಪ್ರತಿಯಾಗಿ ಸಾರ್ವಜನಿಕರಿಗೆ ಬಾಂಡ್‌ಗಳನ್ನೂ ನೀಡಲಾಗಿತ್ತು. ಆದರೆ, ಡಿಸೆಂಬರ್‌ನಿಂದ ಸಂಸ್ಥೆ ಏಕಾಏಕಿ ಲಾಭಾಂಶ ನೀಡುವುದನ್ನು ನಿಲ್ಲಿಸಿದ್ದು, ಸಂಸ್ಥೆಯ ಎಂ.ಡಿ. ಮಹಮ್ಮದ್‌ ಅಸ್ಲಂ ಪಾಷಾ ಈಗ ದುಬೈಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ವಿಡಿಯೋ ಸಂದೇಶ: ಮಾರ್ಚ್ ತಿಂಗಳಿಂದ ಕಂಪನಿ ಬಾಗಿಲು ಹಾಕಿದ್ದು, ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ತುಮಕೂರಿನ ಪೂರ್‌ಹೌಸ್‌ ಮತ್ತು ಸದಾಶಿವನಗರದಲ್ಲಿರುವ ಆತನ ಮನೆ ಮುಂದೆ ಹೋಗಿ ಗಲಾಟೆ ಮಾಡಿದ್ದಾರೆ. ಆಗ ಆತ ಆಡಿಯೋ ಹಾಗೂ ವಿಡಿಯೋ ಸಂದೇಶ ಕಳುಹಿಸಿ ರಂಜಾನ್‌ ಹಬ್ಬ ಮುಗಿಸಿಕೊಂಡು ಊರಿಗೆ ಬಂದು ಎಲ್ಲಾ ಸೆಟಲ್ ಮೆಂಚ್‌ ಮಾಡುವ ಭರವಸೆ ನೀಡಿದ್ದ. ಇದೀಗ ರಂಜಾನ್‌ ಹಬ್ಬ ಮುಗಿದು ಆಗಲೇ 10 ದಿನ ಕಳೆದಿದೆ. ಆದರೂ ಆತನ ಪತ್ತೆಯೇ ಇಲ್ಲ. ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿಲ್ಲ.

ಪೊಲೀಸರಿಗೆ ದೂರು ಕೊಟ್ಟರೆ ಅಕೌಂಟ್‌ ಬ್ಲಾಕ್‌ ಮಾಡುತ್ತಾರೆ. ಇಲ್ಲವೇ ಹ್ಯಾಕ್‌ ಮಾಡುತ್ತಾರೆ. ಆಗ ನಿಮಗೆ ಅಸಲು ಕೂಡ ವಾಪಸ್‌ ಸಿಗುವುದಿಲ್ಲ ಎಂದು ಈಝಿ ಮೈಂಡ್‌ ಕಂಪನಿ ಗ್ರಾಹಕರಿಗೆ ಬೆದರಿಸಿದ್ದರಿಂದ ಇಲ್ಲಿಯವರೆಗೆ ಯಾರೂ ದೂರು ನೀಡಲು ಮುಂದೆ ಬರಲಿಲ್ಲ ಎಂದು ಮೋಸ ಹೋದ ಮಹಮದ್‌ ಹೇಳುತ್ತಾರೆ. ಆದರೆ, ಈಗ ಸಂಸ್ಥೆಯ ಮ್ಯಾನೇಜರ್‌ ಹಾಗೂ ಕಾರ್ಯದರ್ಶಿಗಳೂ ನಾಪತ್ತೆಯಾಗಿದ್ದರಿಂದ ಹಾಗೂ ಐಎಂಎ ವಂಚನೆ ಬಯಲಾಗಿದ್ದರಿಂದ ಸಾರ್ವಜನಿಕರು ಪೊಲೀಸರ ಮೊರೆ ಹೋಗಿದ್ದಾರೆ.

ಯಾರೀ ಮಹಮ್ಮದ್‌ ಅಸ್ಲಂ ಪಾಷ?

ಮಹ್ಮದ್‌ ಪಾಷ ಮೂಲತಃ ತುಮಕೂರಿನವ. ಇಲ್ಲಿನ ಪೂರ್‌ಹೌಸ್‌ ಕಾಲೋನಿಯಲ್ಲಿ ಈತನ ಮನೆ ಇದೆ. ಈಗ ಸ್ಥಾಪಿಸಿರುವ ಈಝಿ ಮೈಂಡ್‌ ಕಂಪನಿ ಇರುವ ಜಾಗದಲ್ಲೇ ಮೊದಲು ಮೊಬೈಲ್‌ ಕರೆನ್ಸಿ ಅಂಗಡಿ ಇಟ್ಟುಕೊಂಡಿದ್ದ ಈತ. ಎರಡು ವರ್ಷಗಳ ಹಿಂದೆ ಈ ವ್ಯವಹಾರಕ್ಕೆ ಧುಮುಕಿದ್ದ. ಜನರಲ್‌ ಪ್ಲಾನ್‌, ಎಜುಕೇಷನ್‌ ಹಾಗೂ ಮದುವೆ ಎಂಬ ಹೆಸರಿನಲ್ಲಿ ಮೂರು ಸ್ಕೀಂಗಳಡಿ ತುಮಕೂರು, ಮಧುರೈ, ಕೇರಳ ಸೇರಿ ರಾಜ್ಯ, ಹೊರರಾಜ್ಯಗಳಿಂದ ಹಣ ಸಂಗ್ರಹಿಸಿದ್ದಾನೆ ಎನ್ನಲಾಗಿದೆ. 2017ರಲ್ಲಿ ಪ್ರಾರಂಭವಾದ ಸಂಸ್ಥೆಯಲ್ಲಿ ಹೂಡಿಕೆ ಮಾಡುವಂತೆ ಸಮುದಾಯದ ಖ್ಯಾತರಾದ ಎಸ್‌.ಕೆ. ಬಿಲ್ಡರ್ಸ್‌ ಆ್ಯಂಡ್‌ ಡೆವಲಪರ್ಸ್‌ನ ಹಕಿಯಾಜ್‌, ಎಸ್‌.ಕೆ. ಫ್ಲೈವುಡ್‌ನ ಹಯಾಜ್‌, ತುಮಾಜ್‌ ಅಹ್ಮದ್‌, ಮಹಮ್ಮದ್‌ ಅಸಾದುಲ್ಲಾ, ಇಬ್ರಾಹಿಂ, ಖಲಿವುಲ್ಲಾ ಕೂಡ ಹೂಡಿಕೆ ಮಾಡಿದ್ದರು. ಇತರರಿಗೂ ಹೂಡಿಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. 2018ರ ಜುಲೈ ತಿಂಗಳವರೆಗೆ ಎಲ್ಲ ಹೂಡಿಕೆದಾರರಿಗೆ ನಿಯಮಿತವಾಗಿ ಲಾಭಾಂಶ ನೀಡಲಾಗಿತ್ತು. ಆ ನಂತರ 1 ಲಕ್ಷ ರು. ಹೂಡಿಕೆ ಮಾಡಿದರೆ 4.10 ತಿಂಗಳಿಗೆ 10 ಲಕ್ಷ ರು. ಲಾಭಾಂಶ ನೀಡುವ ಆಮಿಷ ನೀಡಲಾಗಿತ್ತು. ಇದನ್ನು ನಂಬಿ ನೂರಾರು ಮಂದಿ ಹೆಚ್ಚಿನ ಹಣ ತಂದು ಹೂಡಿಕೆ ಮಾಡಿದ್ದರು. ಇದಾದ ಬಳಿಕವೇ ಪಾಷಾ ಹಣದೊಂದಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.