ಚಾಲಕರಿಗೆ ಕಾಗದದ ಪರ್ಮಿಟ್ ಬದಲು ಇ-ಪರ್ಮಿಟ್ ನೀಡಿಕೆ ಅನಧಿಕೃತ ಆಟೋ ಹಾವಳಿ ತಡೆಯಲು ಆಧಾರ್ ವ್ಯವಸ್ಥೆ ಬಳಕೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅನಧಿಕೃತವಾಗಿ ಸಂಚರಿಸುತ್ತಿರುವ ಆಟೋರಿಕ್ಷಾಗಳಿಗೆ ಕಡಿವಾಣ ಹಾಕುವ ಹಾಗೂ ಪರವಾನಗಿಯ ಅಸಲಿತನ ದೃಢೀಕರಿಸುವ ಉದ್ದೇಶದಿಂದ ಸಾರಿಗೆ ಇಲಾಖೆಯು ಆಟೋರಿಕ್ಷಾಗಳಿಗೆ ಇ-ಪರ್ಮಿಟ್ ನೀಡಲು ನಿರ್ಧರಿಸಿದೆ.
ಸಾರಿಗೆ ಇಲಾಖೆಯು ಬೆಂಗಳೂರು ನಗರದಲ್ಲಿ 1.70 ಲಕ್ಷ ಆಟೋಗಳಿಗೆ ಪರವಾನಗಿ ನೀಡಿದೆ. ಆದರೆ, ಸುಮಾರು 25 ಸಾವಿರಕ್ಕೂ ಹೆಚ್ಚು ಅನಧಿಕೃತ ಆಟೋಗಳು ನಗರದಲ್ಲಿ ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇವುಗಳಿಗೆ ಕಡಿವಾಣ ಹಾಕುವುದು ಹಾಗೂ ಹಾಲಿ ಚಾಲ್ತಿಯಲ್ಲಿರುವ ಪರ್ಮಿಟ್‌ಗಳ ಅಸಲಿತನ ದೃಢೀಕರಿಸುವ ಸಲುವಾಗಿ ಇ-ಪರ್ಮಿಟ್ ಪರಿಚಯಿಸಲು ನಿರ್ಧರಿಸಲಾಗಿದೆ. ಪರ್ಮಿಟ್ ಹೊಂದಿರುವ ವ್ಯಕ್ತಿಯ ಆಧಾರ್ ಕಾರ್ಡ್, ಡಿಎಲ್ ಹಾಗೂ ಪರ್ಮಿಟ್ ಪರಿಶೀಲನೆ ನಡೆಸಲಾಗುವುದು. ಬಳಿಕ ಆ ವ್ಯಕ್ತಿ ಹಾಗೂ ಆಧಾರ್ ಕಾರ್ಡ್‌ನಲ್ಲಿರುವ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ಬಳಿಕ ಬಯೋಮೆಟ್ರಿಕ್ ಮೂಲಕ ಆತನ ಹೆಬ್ಬೆಟ್ಟು ಗುರುತು ಪಡೆದು ಇ-ಪರ್ಮಿಟ್ ನೀಡಲಾಗುವುದು. ಇ-ಪರ್ಮಿಟ್ ನಕಲಿ ಮಾಡಲು ಅವಕಾಶವಿರುವುದಿಲ್ಲ.
- ನಗರದಲ್ಲಿ 1.7 ಲಕ್ಷ ಆಟೋಗಳಿಗೆ ಪರವಾನಗಿ
- ಆದರೆ, 25000 ಅನಧಿಕೃತ ಆಟೋಗಳ ಸಂಚಾರ
- ಈ ಹಾವಳಿ ತಪ್ಪಿಸಲು ಇ-ಪರ್ಮಿಟ್ ವ್ಯವಸ್ಥೆ ಜಾರಿ
- ಆಧಾರ್, ಡಿಎಲ್ ಹಾಗೂ ಪರ್ಮಿಟ್ ಪರಿಶೀಲನೆ
- ಬಯೋಮೆಟ್ರಿಕ್ ಪಡೆದು ಇ-ಪರ್ಮಿಟ್ ವಿತರಣೆ
- ಎರಡೆರಡು ಪರ್ಮಿಟ್ ಹೊಂದುವ ದಂಧೆಗೆ ಬ್ರೇಕ್
ಆಧಾರ್ ಲಿಂಕ್ ಸುಳ್ಳು ಸುದ್ದಿ:
ಸಾರಿಗೆ ಇಲಾಖೆ ಆಟೋ ಚಾಲಕರ ಡಿಎಲ್‌ಗೆ ಆಧಾರ್ ಲಿಂಕ್ ಮಾಡಲು ನಿರ್ಧರಿಸಿದೆ ಎಂಬುದು ಸುಳ್ಳು ಸುದ್ದಿ. ಅಧಿಕೃತ ಸೂಚನೆ ಇಲ್ಲದೆ ಆ ರೀತಿ ಮಾಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ಹಿಂದೆ ಒಬ್ಬನೇ ವ್ಯಕ್ತಿ ಎರಡು ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಎರಡೆರಡು ಆಟೋ ಪರವಾನಗಿ ಪಡೆದಿರುವ ಸಾಧ್ಯತೆ ಇದೆ. ಮ್ಯಾನುವೆಲ್ ವ್ಯವಸ್ಥೆ ಇದ್ದಿದ್ದರಿಂದ ಅಂತವರನ್ನು ಪತ್ತೆ ಹೆಚ್ಚುವುದು ಕಷ್ಟ ಸಾಧ್ಯವಾಗಿತ್ತು. ಇದೀಗ ಇ-ಪರ್ಮಿಟ್ ನೀಡುವುದರಿಂದ ಇಂತಹ ಅನಧಿಕೃತ ಪರವಾನಗಿ ಸಿಕ್ಕಿ ಬೀಳಲಿವೆ. ಪರವಾನಗಿ ಹೊಂದಿದ್ದು, ಆಧಾರ್ ಇಲ್ಲದಿದ್ದವರಿಗೆ ಸಾರಿಗೆ ಇಲಾಖೆಯಲ್ಲಿ ಆಧಾರ್ ಮಾಡಿಸಲಾಗುವುದು. ಆಧಾರ್
ಪ್ರಾಧಿಕಾರದೊಂದಿಗೆ ಈ ಸಂಬಂಧ ಚರ್ಚಿಸಿದ್ದು, ಅವರು ಶಾಂತಿನಗರ ಸಾರಿಗೆ ಇಲಾಖೆ ಕಚೇರಿಯಲ್ಲಿ ಕೌಂಟರ್ ತೆರೆದು ಆಧಾರ್ ನೋಂದಣಿ ಮಾಡಲು ಒಪ್ಪಿದ್ದಾರೆ. ಆಧಾರ್ ಕಾರ್ಡ್ ಇಲ್ಲದಿದ್ದವರು ಈ ಕೌಂಟರ್‌ನಲ್ಲಿ ನೋಂದಣಿ ಮಾಡಿಸಿ ಸ್ವೀಕೃತಿ ಪತ್ರ ನೀಡಿ ಇ-ಪರ್ಮಿಟ್ ಪಡೆಯಬಹುದು ಎಂದು ಹೇಳಿದರು.
ಇ-ಪರ್ಮಿಟ್ ಇಲ್ಲದ ಆಟೋ ಮುಟ್ಟುಗೋಲು: ಆಟೋಗಳಿಗೆ ನೀಡುವ ಇ-ಪರ್ಮಿಟ್ ತಂತ್ರಾಂಶ ಆಭಿವೃದ್ಧಿ ಪಡಿಸುತ್ತಿದ್ದು, ಶೀಘ್ರದಲ್ಲೇ ಈ ಕಾರ್ಯ ಮುಗಿಯಲಿದೆ. ಬಳಿಕ ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿರುವ ಆಟೋಗಳಿಗೆ ಇ-ಪರ್ಮಿಟ್ ಪಡೆಯಲು ಸೂಚನೆ ನೀಡಲಾಗುವುದು. ಇ-ಪರ್ಮಿಟ್ ವಿತರಣೆ ಬಳಿಕ ನಗರದಲ್ಲಿ ಕಾರ್ಯಾಚರಣೆ ನಡೆಸಿ ಪರ್ಮಿಟ್‌ಗಳನ್ನು ಪರಿಶೀಲಾಗುವುದು. ಈ ವೇಳೆ ಇ-ಪರ್ಮಿಟ್ ಇಲ್ಲದೆ ಸಂಚರಿಸುವ ಆಟೋಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ತಿಳಿಸಿದರು.
