ಸಿದ್ದರಾಮಯ್ಯ ಈಗ ಬುರ್ಖಾ ಹಾಕಿ ಓಡಾಡಲಿ: ಸದಾನಂದಗೌಡ
ಸಿದ್ದರಾಮಯ್ಯ ಈಗ ಬುರ್ಖಾ ಹಾಕಿ ಓಡಾಡಲಿ: ಸದಾನಂದಗೌಡ| ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ತಿರುಗೇಟು| ಒಂದೇ ಗೂಟಕ್ಕೆ ಕಟ್ಟಿದ್ದ ಎತ್ತುಗಳಂತೆ ಕಾಂಗ್ರೆಸ್-ಜೆಡಿಎಸ್ ಪರಿಸ್ಥಿತಿ| ರಾಜ್ಯದಲ್ಲಿ ನಾವಾಗಿಯೇ ಸರ್ಕಾರ ರಚಿಸುವ ಪ್ರಯತ್ನ ಮಾಡುವುದಿಲ್ಲ
ನವದೆಹಲಿ[ಮೇ.25]: ‘ಸಿದ್ದರಾಮಯ್ಯ ಅವರು ಇವತ್ತು ಬುರ್ಖಾ ಹಾಕಿಕೊಂಡು ಓಡಾಡುತ್ತಾರೋ? ಬುರ್ಖಾ ಹುಡುಕಿಕೊಂಡು ಅವರು ಹೋಗಿದ್ದಾರಾ? ಇವತ್ತು ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಮೈಸೂರಿಗೆ ಬುರ್ಖಾ ಹಾಕಿಕೊಂಡು ಓಡಾಡಿದರೆ ಜನರು ಅವರನ್ನು ನಂಬುತ್ತಾರೆ. ಆದ್ದರಿಂದ ಅವರು ಹಾಗೆ ಮಾಡಲಿ’ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.
‘ತಮ್ಮ ಸ್ವಂತ ಸಾಧನೆ ಬದಲು ಪ್ರಧಾನಿ ಮೋದಿ ಹೆಸರಲ್ಲಿ ಮತಯಾಚನೆ ಮಾಡುತ್ತಿರುವ ರಾಜ್ಯದ 27 ಬಿಜೆಪಿ ಅಭ್ಯರ್ಥಿಗಳು ಮುಖ ತೋರಿಸುವ ಬದಲು ಬುರ್ಖಾ ಹಾಕಿಕೊಂಡು ಓಡಾಡಲಿ’ ಎಂದು ಚುನಾವಣಾ ಪ್ರಚಾರದ ವೇಳೆ ವ್ಯಂಗ್ಯವಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಮೂಲಕ ತಿರುಗೇಟು ನೀಡಿದರು.
ನವದೆಹಲಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಉಲ್ಲೇಖಿಸಿ ಕಾಂಗ್ರೆಸ್-ಜೆಡಿಎಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು. ನನ್ನ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುರ್ಖಾ ಹಾಕಿಕೊಂಡು ಓಡಾಟ ಮಾಡುತ್ತೇನೆ ಎಂದು ಹೇಳಿದ್ದು ಮಾತ್ರವಲ್ಲದೆ, ಏಕವಚನ ಪ್ರಯೋಗ ವೈಯಕ್ತಿಕ ನಿಂದನೆ, ನನ್ನ ನಗುವಿನ ಬಗ್ಗೆ ಅಪಹಾಸ್ಯ ನಡೆಯಿತು. ಇದಕ್ಕೆಲ್ಲ ಜನರೇ ಉತ್ತರ ಕೊಡುತ್ತಾರೆ ಎಂದು ಸುಮ್ಮನಿದ್ದೆ ಎಂದರು.
ರೇವಣ್ಣ ಸಂನ್ಯಾಸ ತೆಗೆದುಕೊಳ್ಳಲಿ:
ಇದೇವೇಳೆ ಮೋದಿ ಮತ್ತೆ ಪ್ರಧಾನಿಯಾದರೆ, ರಾಜಕಾರಣದಿಂದ ಸಂನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ರೇವಣ್ಣ ಹೇಳಿದ್ದರು. ಈಗ ರೇವಣ್ಣ ರಾಜಕೀಯ ಸಂನ್ಯಾಸ ತೆಗೆದುಕೊಳ್ಳಲಿ. ಮಾಟ ಮಂತ್ರ, ದೇವತಾರಾಧನೆಯಲ್ಲಿ ರೇವಣ್ಣ ಪಳಗಿದವವರು. ಅವರು ಹೇಳಿದ ಮಾತಿನಂತೆ ನಡೆದುಕೊಂಡರೆ ಮಾತ್ರ ಅವರ ದೈವ ಭಕ್ತಿಗೆ ಗೌರವ ಸಿಗುತ್ತದೆ ಎಂದು ತಿವಿದಿದ್ದಾರೆ.
ಒಂದೇ ಗೂಟಕ್ಕೆ ಕಟ್ಟಿದ ಎತ್ತುಗಳು:
ಕಾಂಗ್ರೆಸ್- ಜೆಡಿಎಸ್‌ಗೆ ಮೈತ್ರಿ ಮುಂದುವರಿಸುವುದೇ ದಾರಿ. ಅದು ಬಿಟ್ಟು ಬೇರೆ ದಾರಿಯಿಲ್ಲ, ಕೆಸರಲ್ಲಿ ಹಾಕಿದ ಒಂದು ಗೂಟ. ಆ ಗೂಟ ಯಾವಾಗ ಕಿತ್ತುಕೊಂಡು ಹೋಗುತ್ತೆ ಎಂದು ಗೊತ್ತಿಲ್ಲ. ನಿನ್ನೆಯವರಗೆ ಆ ಗೂಟದಲ್ಲಿ ಕಟ್ಟಿಹಾಕಿದ ಎರಡು ಎತ್ತುಗಳಲ್ಲಿ ಒಂದು ಆ ಕಡೆ, ಇನ್ನೊಂದು ಈ ಕಡೆ ಎಳೆದಾಡುತ್ತಿತ್ತು. ಈಗ ಎರಡೂ ಎತ್ತುಗಳು ಗೂಟದ ಬಳಿ ಬಂದು ಬಿದ್ದುಕೊಂಡಿವೆ. ಇನ್ನೂ ನಾವು ಆ ಕಡೆ, ಈ ಕಡೆ ಹೋಗಬಾರದು ಎಂದುಕೊಂಡಿವೆ ಎಂದು ಮೈತ್ರಿಪಕ್ಷಗಳ ಪರಿಸ್ಥಿತಿ ಬಗ್ಗೆ ವ್ಯಂಗ್ಯವಾಡಿದರು.
ನಾವಾಗಿಯೇ ಸರ್ಕಾರ ರಚನೆಗೆ ರಚಿಸೊಲ್ಲ:
ಕಾಂಗ್ರೆಸ್ - ಜೆಡಿಎಸ್ ನ ಸಾಕಷ್ಟುಶಾಸಕರು ಈಗಾಗಲೇ ತಮ್ಮ ಅತೃಪ್ತಿಯನ್ನು ಹೊರ ಹಾಕಿದ್ದಾರೆ. ನಾವಾಗಿಯೇ ಸರ್ಕಾರ ರಚಿಸುವ ಪ್ರಯತ್ನ ಮಾಡುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅವಕಾಶವಾದಿ ಕಾರಣಕ್ಕೆ ಮಾತ್ರ ಮುಂದುವರಿಯಬಹುದು ಅಷ್ಟೇ. ಆದರೆ ನನಗೆ ನಿನ್ನೆಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ನಾವೆಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದೇವೆ, ಆದಕಾರಣ ನಾವು ಇದ್ದದ್ದನ್ನು ಉಳಿಸಿಕೊಳ್ಳುವ ಎಂಬ ಪ್ರಯತ್ನ ಕಾಂಗ್ರೆಸ್-ಜೆಡಿಎಸ್ ನಾಯಕರಲ್ಲಿ ಪ್ರಾರಂಭಗೊಂಡಿದೆ ಎಂಬ ಮಾಹಿತಿ ಸಿಕ್ಕಿದೆ. ಅತೃಪ್ತರ ಕಾಲಿಗೆ ಬಿದ್ದು, ಬೆಣ್ಣೆ ಹಚ್ಚಿ, ತೇಪೆ ಹಾಕಿ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ಲೋಕಸಭಾ ಚುನಾವಣೆ ಫಲಿತಾಂಶ ಎಲ್ಲರಿಗೂ ಪಾಠ. ಕೆಲಸ ಮಾಡಿ ಮಾತನಾಡಬೇಕು, ಕೆಲಸ ಮಾಡದೇ ಮಾತಾನಾಡುವುದು, ನಾಟಕ ಮಾಡುವುದಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂಬುದಕ್ಕೆ ಈ ಕರ್ನಾಟಕದ ಫಲಿತಾಂಶವೇ ಸಾಕ್ಷಿ ಎಂದರು.