ಅಗರ್ತಲ: ಬಾತುಕೋಳಿಗಳು ಈಜಾಡಿದರೆ ಕೆರೆಗಳಲ್ಲಿ ತನ್ನಿಂತಾನೇ ಆಮ್ಲಜನಕ ಹೆಚ್ಚಾಗುತ್ತದೆ ಎಂಬ ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ದೇಬ್‌ ಅವರ ಹೇಳಿಕೆ ಆನ್‌ಲೈನ್‌ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ನಗೆಪಾಟಲಿಗೀಡಾದ ಬೆನ್ನಲ್ಲೇ, ಬಿಪ್ಲಬ್‌ ಹೇಳಿದ್ದು ಸರಿಯಾಗಿಯೇ ಇದೆ ಎಂದು ತಜ್ಞರು ಸಮರ್ಥಿಸಿಕೊಂಡಿದ್ದಾರೆ.

‘ಬಾತುಕೋಳಿಗಳು ಕೆರೆ, ಕೊಳಗಳಲ್ಲಿ ನೀರಿಗೆ ಗಾಳಿ ತುಂಬುವ ಏರೇಟರ್‌ ರೀತಿ ಕೆಲಸ ಮಾಡುತ್ತವೆ. ಅವುಗಳಿಂದ ನೀರಿನಲ್ಲಿ ಆಮ್ಲಜನಕ ಹೆಚ್ಚಾಗುತ್ತದೆ’ ಎಂದು ಪಶು ಸಂಗೋಪನೆ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕ ಮನೋರಂಜನ್‌ ಸರ್ಕಾರ್‌ ತಿಳಿಸಿದ್ದಾರೆ.

‘ಬಾತುಕೋಳಿಗಳು ನೀರು ಹೀರಿಕೊಳ್ಳುವ ವ್ಯವಸ್ಥೆ ವಿಶಿಷ್ಟವಾಗಿದೆ. ಅಕ್ವೇರಿಯಂ ರೀತಿ ಇವು ಕೆಲಸ ಮಾಡುತ್ತವೆ. ಬಾತುಕೋಳಿಗಳು ನೀರು ಹೀರಿಕೊಂಡು ನೀರಿನ ಗುಳ್ಳೆ ಸೃಷ್ಟಿಯಾಗುತ್ತವೆ. ಅದರಿಂದ ಜಲಮೂಲಗಳಲ್ಲಿ ಆಮ್ಲಜನಕ ಪ್ರಮಾಣ ವೃದ್ಧಿಯಾಗುತ್ತದೆ. ಹೀಗಾಗಿ ಬಾತುಕೋಳಿಗಳು ಈಜಾಡುವ ನೀರಿನಲ್ಲಿ ಆಮ್ಲಜನಕ ಮಟ್ಟಹೆಚ್ಚಾಗುತ್ತದೆ’ ಎಂದು ತ್ರಿಪುರ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜ್ಞಾನಿ ಮಿಹಿರ್‌ ಕುಮಾರ್‌ ದಾಸ್‌ ಕೂಡ ಹೇಳಿದ್ದಾರೆ.