ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯಲ್ಲಿ, ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ನಿಲ್ಲಿಸಿದ್ದ ಸರ್ಕಾರಿ ಬಸ್ಸನ್ನು ಕದ್ದಿದ್ದಾನೆ. ಪೊಲೀಸರು ಜಿಪಿಎಸ್ ಮೂಲಕ ಬಸ್ಸನ್ನು ಬೆನ್ನಟ್ಟಿ, ಸುಮಾರು 18 ಕಿಲೋಮೀಟರ್‌ಗಳ ಸಿನಿಮೀಯ ಚೇಸಿಂಗ್ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆಯಿಂದಾಗಿ ಹೈವೇಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಹೈದರಾಬಾದ್: ತೆಲಂಗಾಣದಲ್ಲಿ ಹಾಲಿವುಡ್ ಸಿನಿಮಾ ಶೈಲಿಯ ರಣರೋಚಕ ಘಟನೆಯೊಂದು ನಡೆದಿದೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ನಿಲ್ಲಿಸಿದ್ದ ಸರ್ಕಾರಿ ಬಸ್ಸನ್ನೇ ಕದ್ದು, ಬರೋಬ್ಬರಿ 18 ಕಿಲೋಮೀಟರ್‌ಗಳ ಕಾಲ ಓಡಿಸಿ ಕೊನೆಗೆ ಸಿಕ್ಕಿಬಿದ್ದಿದ್ದಾನೆ. ಈ ಹೈವೇ ಚೇಸಿಂಗ್ ವೇಳೆ ರಸ್ತೆಯಲ್ಲಿದ್ದ ವಾಹನ ಸವಾರರು ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿದ ಘಟನೆ ಜಗ್ತಿಯಾಲ್ ಜಿಲ್ಲೆಯಲ್ಲಿ ನಡೆದಿದೆ.

ನಡೆದಿದ್ದೇನು?

ಜಗ್ತಿಯಾಲ್ ಜಿಲ್ಲೆಯ ಕೋರುಟ್ಲಾ ಬಸ್ ನಿಲ್ದಾಣದಲ್ಲಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (TGSRTC) ಬಸ್ಸೊಂದನ್ನು ಪಾರ್ಕ್ ಮಾಡಲಾಗಿತ್ತು. ಚಾಲಕ ಮತ್ತು ನಿರ್ವಾಹಕರು ಬಸ್ಸಿನಿಂದ ಕೆಳಗಿಳಿದಿದ್ದನ್ನು ಗಮನಿಸಿದ ಕುಡುಕ ವ್ಯಕ್ತಿಯೊಬ್ಬ, ಸೀದಾ ಡ್ರೈವರ್ ಸೀಟ್ ಏರಿ ಬಸ್ಸನ್ನು ಸ್ಟಾರ್ಟ್ ಮಾಡಿದ್ದಾನೆ. ಜನನಿಬಿಡ ಪ್ರದೇಶದಲ್ಲೇ ಬಸ್ಸನ್ನು ವೇಗವಾಗಿ ಓಡಿಸಿಕೊಂಡು ಮೆಟ್‌ಪಲ್ಲಿ ಕಡೆಗೆ ಪರಾರಿಯಾಗಿದ್ದಾನೆ.

ಬಸ್ ನಾಪತ್ತೆಯಾಗಿರುವುದನ್ನು ಗಮನಿಸಿದ ಆರ್‌ಟಿಸಿ ಭದ್ರತಾ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡಿದ್ದಾರೆ. ಬಸ್ಸಿನಲ್ಲಿದ್ದ ಜಿಪಿಎಸ್ (GPS) ವ್ಯವಸ್ಥೆಯನ್ನು ಟ್ರ್ಯಾಕ್ ಮಾಡಿದಾಗ ಬಸ್ ವೇಗವಾಗಿ ಮೆಟ್‌ಪಲ್ಲಿ ರಸ್ತೆಯಲ್ಲಿ ಹೋಗುತ್ತಿರುವುದು ಪತ್ತೆಯಾಗಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಹೈವೇಯಲ್ಲಿ ಪೊಲೀಸ್ ಜೀಪ್‌ಗಳು ಬಸ್ಸನ್ನು ಬೆನ್ನಟ್ಟಿವೆ.

ಪೊಲೀಸರು ಬೆನ್ನಟ್ಟುತ್ತಿರುವುದನ್ನು ಕಂಡ ಕುಡುಕ ಚಾಲಕ, ಬಸ್ಸನ್ನು ಮತ್ತಷ್ಟು ವೇಗವಾಗಿ ಚಲಾಯಿಸಿದ್ದಾನೆ. ಈ ರಣರೋಚಕ ಚೇಸಿಂಗ್ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಮೂರು ದ್ವಿಚಕ್ರ ವಾಹನಗಳಿಗೆ ಬಸ್ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲದೆ, ಅಡ್ಡ ಬಂದ ಪೊಲೀಸ್ ವಾಹನಕ್ಕೂ ಗುದ್ದಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದಾನೆ. ಅದೃಷ್ಟವಶಾತ್ ದೊಡ್ಡ ಮಟ್ಟದ ಪ್ರಾಣಹಾನಿ ಸಂಭವಿಸಿಲ್ಲ.

ಕೊನೆಗೂ ಸಿಕ್ಕಿಬಿದ್ದ ಖದೀಮ

ಪೊಲೀಸರು ಮೆಟ್‌ಪಲ್ಲಿ ಬಳಿ ಹೈವೇಯನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಿ ಬಸ್ಸನ್ನು ತಡೆಯುವಲ್ಲಿ ಯಶಸ್ವಿಯಾದರು. ಈ ವೇಳೆ ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಬಸ್ಸಿನಿಂದ ಇಳಿದು ಓಡಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದು ಜೈಲಿಗಟ್ಟಿದ್ದಾರೆ. ಬಸ್ ನಿಲ್ದಾಣದಂತಹ ಕಟ್ಟುನಿಟ್ಟಿನ ಭದ್ರತೆ ಇರುವ ಜಾಗದಲ್ಲಿ ವ್ಯಕ್ತಿಯೊಬ್ಬ ಬಸ್ಸನ್ನು ಹೇಗೆ ಕದ್ದ? ಅಲ್ಲಿನ ಸಿಬ್ಬಂದಿ ಏನು ಮಾಡುತ್ತಿದ್ದರು? ಎಂಬ ಬಗ್ಗೆ ಈಗ ತನಿಖೆ ಆರಂಭವಾಗಿದೆ. ಮದ್ಯದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾನೋ ಅಥವಾ ಇದರ ಹಿಂದೆ ಬೇರೆ ಉದ್ದೇಶವಿದೆಯೇ ಎಂಬ ಬಗ್ಗೆ ಹೆಬ್ಬಗೋಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Scroll to load tweet…