ಬರೇಲಿ[ಮೇ.05]: ಮದ್ಯದ ಅಮಲಿನಲ್ಲಿ ನೀರಿಲ್ಲದ 30 ಅಡಿ ಬಾವಿಗೆ ಬಿದ್ದು ಪರದಾಡುತ್ತಿದ್ದ ವ್ಯಕ್ತಿ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾದ ಘಟನೆ ಸಂಭಾಲ್‌ ಜಿಲ್ಲೆಯ ಇಟ್ವಾ ಎಂಬ ಹಳ್ಳಿಯಲ್ಲಿ ಘಟನೆ ಸಂಭವಿಸಿದೆ.

ಶ್ರೀಪಾಲ್‌ ಎಂಬಾತ ಕುಡಿದ ಅಮಲಿನಲ್ಲಿ ಪಾಳು ಬಾವಿಗೆ ಬಿದ್ದಿದ್ದ. ಕುಡಿದ ಮತ್ತು ಇಳಿದ ಮೇಲೆ ಅಲ್ಲಿಂದಲೇ ಆತ ಹಲವು ಬಾರಿ ರಕ್ಷಣೆಗೆ ಕೂಗಾಡಿದ್ದಾನೆ. ಆದರೆ ಯಾರಿಗೂ ಆತನ ಧ್ವನಿ ಕೇಳಿಲ್ಲ. ಕೊನೆಗೆ ತುರ್ತುಸೇವೆಗೆ ಪೊಲೀಸರಿಗೆ ಕರೆ ಮಾಡಲು ಇರುವ 100 ಸಂಖ್ಯೆಗೆ ತನ್ನ ಮೊಬೈಲ್‌ನಿಂದ ಕರೆ ಮಾಡಿದ್ದಾನೆ.

ಅದೃಷ್ಟವಶಾತ್‌ ಅಲ್ಲಿ ಆತನಿಗೆ ಮೊಬೈಲ್‌ ಸಂಪರ್ಕ ಸಿಕ್ಕಿದ್ದು, ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಅವರು ಕೂಡಲೇ ಸ್ಥಳಕ್ಕೆ ಆಗಮಿಸಿ ಶ್ರೀಪಾಲ್‌ನನ್ನು ಬಚಾವ್‌ ಮಾಡಿದ್ದಾರೆ.