ರಾಯಚೂರು (ಮೇ. 09):  ಬೀದರ್‌ ಜಿಲ್ಲೆಯ ಚಿಮ್ಮೇಗಾಂವ್‌ ತಾಂಡಾದಲ್ಲಿ ಬಾವಿಗಿಳಿದು ನೀರೆತ್ತಬೇಕಾದ ಸ್ಥಿತಿ ಇದ್ದರೆ ಪಕ್ಕದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಜೀವ ಜಲಕ್ಕಾಗಿನ ಪರದಾಟ ಇದಕ್ಕಿಂತಲೂ ಭೀಕರ. ಗುಂಡೆರಾವ್‌ ಗ್ರಾಮದಲ್ಲಿ ಕೊಡ ನೀರಿಗಾಗಿ 18 ಅಡಿ ಏಣಿ ಹತ್ತಿಳಿಯಬೇಕು, 30-40 ಅಡಿ ಆಳಕ್ಕಿಳಿದು ಇಳಿಜಾರು ಕೋರೆಯಲ್ಲಿ ಜೀವ ಪಣಕ್ಕಿಟ್ಟು ನೀರು ಸಂಗ್ರಹಿಸಬೇಕು!

ಹೌದು, ಲಿಂಗಸುಗೂರು ತಾಲೂಕಿನ ಪೈದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡೆರಾವ್‌ ದೊಡ್ಡಿಯಲ್ಲಿ ಕೊಡ ನೀರಿಗಾಗಿ ಹೆಣ್ಣುಮಕ್ಕಳು ಜೀವವನ್ನೇ ಪಣಕ್ಕಿಡಬೇಕು. ತಳಕಂಡಿರುವ ಬಾವಿಗೆ ಬಿದಿರಿನ ಏಣಿ ಇಟ್ಟು, ಇಳಿಜಾರಿನಲ್ಲಿ ಸರ್ಕಸ್‌ ಮಾಡಿಕೊಂಡು ಬಾವಿ ಹತ್ತಿಳಿಯುವುದು ನಿಜಕ್ಕೂ ಅಪಾಯಕಾರಿ. ಸ್ವಲ್ಪ ಆಯ ತಪ್ಪಿದರೂ ಜೀವ ಉಳಿಯುವ ಗ್ಯಾರಂಟಿಯೇ ಇಲ್ಲ. ಇಷ್ಟಾದರೂ ಸಂಬಂಧಪಟ್ಟಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಈ ಕುರಿತು ಗಮನಹರಿಸುವ ಪುರುಸೊತ್ತೂ ಇಲ್ಲ.

ವರತೆ ಸಿಕ್ಕರೆ ಬದುಕು:

ಭೀಕರ ಬರದಿಂದಾಗಿ ಜಿಲ್ಲೆಯಲ್ಲಿ ಜೀವಜಲದ ಸಮಸ್ಯೆ ದಿನೇದಿನೇ ಬಿಗಡಾಯಿಸುತ್ತಿದೆ. ನಿರೀಕ್ಷಿತ ಪ್ರಮಾಣದ ಮಳೆಯಿಲ್ಲದ ಕಾರಣ ಜಲಮೂಲಗಳು ಪಾತಾಳಕ್ಕೆ ಸೇರುತ್ತಿವೆ. ಲಿಂಗಸುಗೂರು ತಾಲೂಕಿನಲ್ಲಂತೂ ಪರಿಸ್ಥಿತಿ ಗಂಭೀರವಾಗಿದೆ.

ತಾಲೂಕಿನ ಗುಡ್ಡಗಾಡು ಪ್ರದೇಶದ ಪೈದೊಡ್ಡಿ, ಗೌಡೂರು ಗ್ರಾ.ಪಂ. ವ್ಯಾಪ್ತಿಯ ಹಡಲಗೇರದೊಡ್ಡಿ, ಮಕಾಸೇರದೊಡ್ಡಿ, ಗುಡ್ಡಕಾಯೇರ ದೊಡ್ಡಿ, ನಾಗಪ್ಪಗಡ್ಡಿ ದೊಡ್ಡಿ, ಮಲಕಾಜೇರದೊಡ್ಡಿ, ಯರಜಂತಿ ಬಳಿಯ ಏಳು ಮಡಿಕೇರದೊಡ್ಡಿ, ಗುಂಡೆರಾವ ದೊಡ್ಡಿ ಸೇರಿ ಕೊಳವೆಬಾವಿ, ಬಾವಿ, ಹಳ್ಳಗಳು ಬತ್ತಿ ಬರಿದಾಗಿವೆ. ತಗ್ಗು ಪ್ರದೇಶದಲ್ಲಿ ಗುಂಡಿ, ವರತೆ ತೋಡುವ ಜನ ಸಿಗುವ ಅಲ್ಪ-ಸ್ವಲ್ಪ ನೀರನ್ನೇ ಕುಡಿಯುತ್ತಿದ್ದಾರೆ.

ಮಲಿನ ನೀರೇ ಜಲಾಮೃತ:

ಈ ತಾಲೂಕಿನ ಬಹುತೇಕ ಗುಡ್ಡಗಾಡು ವ್ಯಾಪ್ತಿಯ ದೊಡ್ಡಿ, ತಾಂಡಾಗಳಲ್ಲಿ ಸೂಕ್ತ ನೀರು ಸರಬರಾಜು ವ್ಯವಸ್ಥೆಯೇ ಇಲ್ಲ. ಇದರಿಂದಾಗಿ ಅಲ್ಲಿನ ಜನರಿಗೆ ಕೊಳವೆ ಬಾವಿ, ಅವರೇ ನಿರ್ಮಿಸಿಕೊಂಡ ಗುಂಡಿ, ಬಾವಿಗಳೇ ಬೇಸಿಗೆಯಲ್ಲಿ ಆಸರೆ. ಮಳೆಗಾಲದಲ್ಲಿ ಬೀಳುವ ಅಲ್ಪಸ್ವಲ್ಪ ಮಳೆ ಈ ಗುಂಡಿ, ಬಾವಿಗಳಲ್ಲಿ ಸಂಗ್ರಹವಾದಾಗ ಬೇಸಿಗೆಯ ಆರಂಭದ ಕೆಲ ಸಮಯದವರೆಗೆ ಇಲ್ಲಿನ ಜನರ ದಾಹ ನೀಗಿಸುತ್ತದೆ. ಬಿಸಿಲ ತೀವ್ರತೆ ಜಾಸ್ತಿಯಾದಾಗ ಈ ಗುಂಡಿ-ಬಾವಿಗಳಲ್ಲಿ ಉಳಿಯುವ ಅಲ್ಪಸ್ವಲ್ಪ ನೀರು ಮಲಿನಗೊಂಡಿದ್ದು, ಇದೇ ಇಲ್ಲಿನ ಜನರಿಗೆ ಜೀವಾಮೃತವಾಗಿದೆ.

ಗುಳೆ ಪ್ರಮಾಣ ಹೆಚ್ಚು:

ಬೇಸಿಗೆ ಬಂತೆಂದರೆ ನೀರಿನ ಕೊರತೆ ಬಾಧಿಸುವುದರಿಂದ ರಾಯಚೂರು ಜಿಲ್ಲೆಯಲ್ಲಿ ಸಹಜವಾಗಿಯೇ ಗುಳೇ ಪ್ರಮಾಣ ಹೆಚ್ಚು. ಜಿಲ್ಲೆಯ ಉಳಿದ ಭಾಗದಂತೆ ಈ ತಾಂಡಾಗಳ, ದೊಡ್ಡಿಗಳ ಪರಿಸ್ಥಿತಿಯೂ ಭಿನ್ನವಾಗಿಯೇನೂ ಇಲ್ಲ.

ಬಾವಿಗೆ ಬಿದ್ದ ಎತ್ತು:

ಗುಂಡೆರಾವ್‌ ದೊಡ್ಡಿಯಲ್ಲಿ ಇತ್ತೀಚೆಗೆ ಬಿಸಿಲ ಬೇಗೆಗೆ ತತ್ತರಿಸಿದ ಎತ್ತೊಂದು ತೀವ್ರ ಬಾಯಾರಿಕೆಯಿಂದ ಬಳಲಿ ಇಡೀ ಗುಡ್ಡಗಾಡು ಪ್ರದೇಶವನ್ನು ಸುತ್ತಾಡಿದೆ. ನೀರು ಸಿಕ್ಕಿಲ್ಲ. ಕೊನೆಗೆ ಅದರ ಕಣ್ಣಿಗೆ ಬಿದ್ದದ್ದು ಆಳದ ಬಾವಿ. ಈ ಬಾವಿಯಲ್ಲಿ ಅಲ್ಪಪ್ರಮಾಣದ ನೀರು ಕಂಡು ಕುಡಿಯಲು ಹೋದಾಗ ಜಾರಿ ಬಿದ್ದು ಗಾಯಮಾಡಿಕೊಂಡಿತ್ತು. ಹೀಗೆ ಬಿದ್ದಾಗ ಅದು ಬದುಕುಳಿದಿದ್ದೇ ಪವಾಡ ಎಂದು ದೊಡ್ಡಿಯ ನಿವಾಸಿಗಳು ಮನುಷ್ಯರಷ್ಟೇ ಅಲ್ಲದೆ ಪ್ರಾಣಿಗಳೂ ಹನಿ ನೀರಿಗಾಗಿ ಎದುರಿಸುವ ಪಡುವ ಪಡಿಪಾಟಲನ್ನು ಬಿಚ್ಚಿಡುತ್ತಾರೆ.

- ರಾಮಕೃಷ್ಣ ದಾಸರಿ