ಸಭೆಯ ಬಳಿಕ ಸುವರ್ಣನ್ಯೂಸ್ ಜೊತೆ ಮಾತನಾಡಿದ ಡಾ| ಸುಧಾಕರ್ ತಮ್ಮ ರಾಜೀನಾಮೆ ನಿರ್ಧಾರವನ್ನು ಬದಲಿಸಿರುವುದಾಗಿ ತಿಳಿಸಿದ್ದಾರೆ. ಪಕ್ಷದಲ್ಲಿ ಒಬ್ಬ ಹಿರಿಯ ನಾಯಕರಿಗೆ ಬೆಲೆ ಸಿಗಲಿಲ್ಲ ಎಂಬ ನೋವಿನಿಂದ ತಾನು ರಾಜೀನಾಮೆ ಕೊಡಲು ಮುಂದಾಗಿದ್ದೆ ಅಷ್ಟೇ ಎಂದು ಹೇಳಿದ್ದಾರೆ.
ಬೆಂಗಳೂರು(ಜುಲೈ 07): ತಮ್ಮ ತಂದೆಗೆ ಅವಮಾನವಾಯಿತೆಂದು ಮುನಿಸಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದ ಚಿಕ್ಕಬಳ್ಳಾಪುರ ಶಾಸಕ ಡಾ. ಕೆ.ಸುಧಾಕರ್ ತಮ್ಮ ನಿರ್ಧಾರ ಬದಲಿಸಿದ್ದಾರೆ. ಹಿರಿಯ ಕಾಂಗ್ರೆಸ್ ಮುಖಂಡರು ಸುಧಾಕರ್ ಅವರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ. ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ರಾಮಲಿಂಗ ರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಎಐಸಿಸಿ ಕಾರ್ಯದರ್ಶಿ ಮಧು ಯಾಸ್ಕಿ ಗೌಡ್, ಕೋಲಾರ ಸಂಸದ ಕೆಎಚ್ ಮುನಿಯಪ್ಪ ಅವರು ಸುಧಾಕರ್ ಮನೆಗೆ ತೆರಳಿ ಸಂಧಾನ ನಡೆಸಿದ್ದರು. ಈ ಸಭೆಯಲ್ಲಿ ಡಾ. ಸುಧಾಕರ್ ತಂದೆ ಕೇಶವ ರೆಡ್ಡಿಯವರೂ ಪಾಲ್ಗೊಂಡಿದ್ದರು.
ಸಭೆಯ ಬಳಿಕ ಸುವರ್ಣನ್ಯೂಸ್ ಜೊತೆ ಮಾತನಾಡಿದ ಡಾ| ಸುಧಾಕರ್ ತಮ್ಮ ರಾಜೀನಾಮೆ ನಿರ್ಧಾರವನ್ನು ಬದಲಿಸಿರುವುದಾಗಿ ತಿಳಿಸಿದ್ದಾರೆ. ಪಕ್ಷದಲ್ಲಿ ಒಬ್ಬ ಹಿರಿಯ ನಾಯಕರಿಗೆ ಬೆಲೆ ಸಿಗಲಿಲ್ಲ ಎಂಬ ನೋವಿನಿಂದ ತಾನು ರಾಜೀನಾಮೆ ಕೊಡಲು ಮುಂದಾಗಿದ್ದೆ ಅಷ್ಟೇ ಎಂದು ಹೇಳಿದ್ದಾರೆ. ತಾನು ಬಿಜೆಪಿ ಸೇರುತ್ತಿರುವ ಕುರಿತು ಇದ್ದ ಸುದ್ದಿಗಳನ್ನು ಸಾರಾಸಗಟಾಗಿ ನಿರಾಕರಿಸಿದ ಅವರು, ತಾನು ಕಾಂಗ್ರೆಸ್'ನ ನಿಷ್ಠಾವಂತ ಕಾರ್ಯಕರ್ತರನಾಗಿದ್ದು, ಬೇರೆ ಪಕ್ಷ ಸೇರುವ ಯೋಚನೆಯೇ ಇರಲಿಲ್ಲ. ಶಾಸಕ ಸ್ಥಾನಕ್ಕಷ್ಟೇ ರಾಜೀನಾಮೆ ನೀಡಲು ನಿರ್ಧರಿಸಿದ್ದೆ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ವೇಣುಗೋಪಾಲ್ ಗರಂ:
ಇದಕ್ಕೂ ಮುನ್ನ ಕಾಂಗ್ರೆಸ್'ನ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಸುಧಾಕರ್ ರಾಜೀನಾಮೆ ಪ್ರಕರಣದ ವಿಚಾರದಲ್ಲಿ ಬಹಳ ಗರಂ ಆಗಿದ್ದ ಸುದ್ದಿ ಕೇಳಿಬಂದಿತ್ತು. ಯಾರೇ ಆದರೂ ಯಾವುದೇ ಕಾರಣಕ್ಕೂ ಬ್ಲ್ಯಾಕ್'ಮೇಲ್ ತಂತ್ರಕ್ಕೆ ಮಣಿಯಬಾರದು ಎಂದು ಕಟ್ಟುನಿಟ್ಟಾಗಿ ಪಕ್ಷದ ಮುಖಂಡರಿಗೆ ವೇಣುಗೋಪಾಲ್ ಕಟ್ಟಪ್ಪಣೆ ಹೊರಡಿಸಿದ್ದರು.
ರಾಜೀನಾಮೆಗೆ ಮುಂದಾಗಲು ಕಾರಣವೇನು?
ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಚಿಕ್ಕಬಳ್ಳಾಪುರ ಕಾಂಗ್ರೆಸ್ ಮುಖಂಡರ ಸಭೆ ನಡೆದಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನದಿಂದ ಸುಧಾಕರ್ ತಂದೆ ಕೇಶವ ರೆಡ್ಡಿಯವರನ್ನು ಕೆಳಗಿಳಿಸಬೇಕೆಂಬ ಕೂಗು ಕೇಳಿಬಂದಿತ್ತು. ವೀರಪ್ಪ ಮೊಯಿಲಿ ಬೆಂಬಲಿಗರು ಕೇಶವ ರೆಡ್ಡಿ ವಿರುದ್ಧ ತೀವ್ರ ಪ್ರತಿಭಟನೆಯನ್ನೂ ಮಾಡಿದರು. ಇದಾದ ಬೆನ್ನಲ್ಲೇ ಕೇಶವ ರೆಡ್ಡಿ ಪುತ್ರ ಡಾ. ಸುಧಾಕರ್ ತಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಟ್ವಿಟ್ಟರ್'ನಲ್ಲಿ ಘೋಷಣೆ ಮಾಡಿದ್ದರು. ಒಂದು ಕಾಲದಲ್ಲಿ ಎಸ್ಸೆಂ ಕೃಷ್ಣ ಅವರ ಆತ್ಮೀಯರೆನಿಸಿದ್ದ ಸುಧಾಕರ್ ಅವರು ಬಿಜೆಪಿಯನ್ನ ಸೇರುತ್ತಾರೆ ಎಂಬ ವದಂತಿಗಳೂ ಹರಡಿದ್ದವು.
ಇನ್ನು, ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿವಾದದ ವಿಚಾರದಲ್ಲಿ ನೇರ ಸೂತ್ರ ಬಳಕೆ ಮಾಡುವಂತೆ ಸೂಚಿಸಿದ್ದಾರೆ. ಅಂದರೆ, ಯಾರ ಪರ ಹೆಚ್ಚು ಸದಸ್ಯರ ಬಲ ಇರುತ್ತದೋ ಅವರೇ ಅಧ್ಯಕ್ಷರಾಗಲಿ. ಕೇಶವರೆಡ್ಡಿಗೆ ಬಹುಮತ ಇದ್ದರೆ ಮುಂದುವರಿಸಿ. ಇಲ್ಲದಿದ್ದರೆ ರಾಜೀನಾಮೆ ನೀಡಲಿ. ಯಾವುದೇ ಕಾರಣಕ್ಕೂ ಬ್ಲ್ಯಾಕ್'ಮೇಲ್ ತಂತ್ರಕ್ಕೆ ಮಣಿಯಬಾರದು ಎಂದು ವೇಣುಗೋಪಾಲ್ ಅವರು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರಿಗೆ ಸೂಚನೆ ನೀಡಿದ್ದರು. ಸುಧಾಕರ್ ತಂದೆ ಕೇಶವ ರೆಡ್ಡಿ ಪರ 10 ಮಂದಿ ಇದ್ದು, ವಿರುದ್ಧವಾಗಿ 12 ಮಂದಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಕೇಶವರೆಡ್ಡಿಯವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದು ಬಹುತೇಕ ಖಚಿತವಾಗಿದೆ.
