ಒಂದು ವೇಳೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮಕ್ಕಳ ಸಾವು ಸಂಭವಿಸಿದ್ದರೆ, ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು ಕಫೀಲ್ ಖಾನ್ ಅವರನ್ನು ಅವರ ಕರ್ತವ್ಯದಿಂದ ಹೊರಹಾಕಲಾಗಿದೆ.
ಗೋರಖ್'ಪುರ(ಆ.14): ಕಳೆದ ಮೂರು ದಿನಗಳ ಹಿಂದೆ ಬಿಆರ್'ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸುಮಾರು 70 ಮಕ್ಕಳು ಮೃತಪಟ್ಟಿರುವುದು ದೇಶದಾದ್ಯಂತ ಸುದ್ದಿಯಾಗಿತ್ತು. ಆಗಸ್ಟ್ 10 ಮತ್ತು 11ರ ರಾತ್ರಿ ಆಮ್ಲಜನಕದ ಕೊರತೆಯಿಂದ ಪರಿಸ್ಥಿತಿ ಕೈಮೀರಿ ಹೋಗಿದ್ದಾಗ ಬೇರೆ ದಾರಿ ಕಾಣದೇ ತಮ್ಮ ಸ್ವಂತ ಹಣ ವ್ಯಯಮಾಡಿ 12 ಆಮ್ಲಜನಕದ ಸಿಲಿಂಡರ್'ಗಳನ್ನು ಆಸ್ಪತ್ರೆಗೆ ತರಿಸಿದ್ದ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಕಫೀಲ್ ಖಾನ್ ಅವರನ್ನು ಸರ್ಕಾರ ವಜಾ ಮಾಡಿದೆ.
ಈಗಾಗಲೇ ಗೂರಖ್'ಪುರ್ ಮಕ್ಕಳ ದುರಂತದ ಬಗ್ಗೆ ತನಿಖೆ ನಡೆಯುತ್ತಿದ್ದು, ಒಂದು ವೇಳೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮಕ್ಕಳ ಸಾವು ಸಂಭವಿಸಿದ್ದರೆ, ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು ಕಫೀಲ್ ಖಾನ್ ಅವರನ್ನು ಅವರ ಕರ್ತವ್ಯದಿಂದ ಹೊರಹಾಕಲಾಗಿದೆ. ಆದರೆ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಆಗಸ್ಟ್10&11ರ ರಾತ್ರಿ ಏನಾಗಿತ್ತು:
ಆ ಎರಡು ದಿನಗಳ ರಾತ್ರಿ ಆಮ್ಲಜನಕದ ಕೊರತೆಯಿಂದ ಪರಿಸ್ಥಿತಿ ಕೈಮೀರಿ ಹೋಗಿತ್ತು. ಕೊನೆಗೆ ಮಕ್ಕಳನ್ನು ಸಾವಿನ ದವಡೆಯಿಂದ ಪಾರು ಮಾಡಲು ವಿಧಿಯಿಲ್ಲದೇ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ. ಕಫೀಲ್ ಖಾನ್ ಸ್ವಂತ ಖರ್ಚಿನಲ್ಲಿ ಸಿಲಿಂಡರ್ ಪೂರೈಸಿ ಮಾನವೀಯತೆ ಮೆರೆದಿದ್ದರು. ಮುಂಜಾನೆ 2 ಗಂಟೆಗೆ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಾಗಿದ್ದ ಬಗ್ಗೆ ಸಿಬ್ಬಂದಿಯಿಂದ ಕರೆ ಬಂದ ಬಳಿಕ ತಕ್ಷಣ ತಮ್ಮ ಸ್ನೇಹಿತರ ನರ್ಸಿಂಗ್ ಹೋಂನಿಂದ 2 ಆಮ್ಲಜನಕದ ಸಿಲಿಂಡರ್'ಗಳನ್ನು ತರಿಸಿದರು. ಅದೂ ಸಾಲದಿದ್ದಾಗ 10 ಸಾವಿರ ರುಪಾಯಿ ಸ್ವಂತ ಹಣ ಖರ್ಚು ಮಾಡಿ 12 ಆಮ್ಲಜನಕದ ಸಿಲಿಂಡರ್'ಗಳನ್ನು ತಂದು ವಾರ್ಡ್'ಗೆ ಪೂರೈಸಿದ್ದರು.
