ಕುಡಿಯುವ ನೀರು ಮತ್ತು ಫ್ಲೆಕ್ಸ್ ಕಟ್ಟುವ ವಿಚಾರದಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತೊಪದಪನಹಳ್ಳಿ ಗ್ರಾಮದಲ್ಲಿ 2 ದಿನದ ಹಿಂದೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಮಾರಿ ನಡೆದಿತ್ತು.
ಮಂಡ್ಯ(ಡಿ.26): ಹಳೆಯ ರಾಜಕೀಯ ದ್ವೇಷಕ್ಕೆ ಮಂಡ್ಯದ ಮದ್ದೂರು ತಾಲೂಕಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಇಬ್ಬರು ಜೆಡಿಎಸ್ ಕಾರ್ಯಕರ್ತರ ಕೊಲೆಯಾಗಿ, ಹಲವರು ಗಾಯಗೊಂಡಿದ್ದಾರೆ. ನಂದೀಶ್ ಮತ್ತು ಮುತ್ತುರಾಜು ಕೊಲೆಯಾದವರು. ಕುಡಿಯುವ ನೀರು ಮತ್ತು ಫ್ಲೆಕ್ಸ್ ಕಟ್ಟುವ ವಿಚಾರದಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತೊಪದಪನಹಳ್ಳಿ ಗ್ರಾಮದಲ್ಲಿ 2 ದಿನದ ಹಿಂದೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಮಾರಿ ನಡೆದಿತ್ತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಎರಡು ಕಡೆಯವರನ್ನು ಸಮಾಧಾನ ಪಡಿಸಿ ಸುಮ್ಮನಾಗಿಸಿದ್ದರು. ಆದರೆ ಭಾನುವಾರ ರಾತ್ರಿ ೮ ಗಂಟೆ ವೇಳೆಗೆ ಮತ್ತೆ ಎರಡು ಕಡೆಯವರು ಪರಸ್ಪರ ಬಡಿದಾಡಿಕೊಂಡಿದ್ದಾರೆ.
ಈ ವೇಳೆ ಜೆಡಿಎಸ್ ಕಾರ್ಯಕರ್ತರಾದ ನಂದೀಶ್ ಮತ್ತು ಮುತ್ತುರಾಜು ಎಂಬುವರನ್ನು ಕೊಲೆ ಮಾಡಲಾಗಿದೆ. ಮಾರಾಮಾರಿಯಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರಿಗೆ ಗಾಯಗಳಾಗಿದ್ದು, ಮದ್ದೂರು ಸಾರ್ವಜನಿಕ ಆಸ್ಪತ್ರೆ ಹಾಗೂ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚನ್ನೇಗೌಡ ಮತ್ತು ಹೊನ್ನಯ್ಯ ಎಂಬುವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಕಾಂಗ್ರೆಸ್ ಕಾರ್ಯಕರ್ತರ ವರ್ತನೆಯೇ ಕಾರಣವಾಗಿದ್ದು, ಬೆಂಗಳೂರಿನಿಂದ ಹುಡುಗರನ್ನು ಕರೆಸಿ ಕೊಲೆ ಮಾಡಲಾಗಿದೆ ಎಂಬುದು ಜೆಡಿಎಸ್ ಕಾರ್ಯಕರ್ತರ ಆರೋಪವಾಗಿದೆ.
ಮದ್ದೂರು ಪೊಲೀಸರು ಮದ್ದೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರಾದ ಮುತ್ತುರಾಜ್,ಶಿವು ಹಾಗು ಹೇಮಂತ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿಭದ್ರತೆ ಕಲ್ಪಿಸಲಾಗಿದೆ.
