Asianet Suvarna News Asianet Suvarna News

ಮೊಬೈಲ್ ಫೋನ್ ನೀರಿಗೆ ಬಿತ್ತೇ? ಆಗ ಏನ್ ಮಾಡ್ಬೇಕು, ಏನ್ ಮಾಡ್ಬಾರ್ದು?

ನಾವು ಬಳಸುವ ಮೊಬೈಲ್ ಫೋನ್’ಗಳು ಸೂಕ್ಷ್ಮವಾದ ಇಲೆಕ್ಟ್ರಾನಿಕ್ಸ್ ಉಪಕರಣಗಳಾಗಿವೆ. ನಾವು ಮಳೆಯಲ್ಲಿ ನೆನೆದಾಗ, ಬೀಚ್/ ಜಲಪಾತಗಳಲ್ಲಿ ಮೋಜು ಮಾಡುವಾಗ ಒದ್ದೆಯಾಗುತ್ತವೆ, ಕೆಲವೊಮ್ಮೆ ಮನೆಯಲ್ಲಿರುವ ಪುಟಾಣಿಗಳೇ ನಿಮ್ಮ ಫೋನನ್ನು ನೀರಿನೊಳಗೆ ಹಾಕಿ ಏನೋ ಕಿತಾಪತಿ ಮಾಡಿರುತ್ತವೆ. ಮೊಬೈಲ್ ಫೋನ್ ನೀರೊಳಗೆ ಬಿದ್ದಾಗ ಏನು ಮಾಡಬೇಕು? ಏನು ಮಾಡಬಾರದು? ಎಂಬುವುದನ್ನು ಗಮನಿಸಿ: 

Dos and Do Nots When Mobile Falls into Water

ಫೋನನ್ನು ಒರೆಸಿ ಬಟ್ಟೆಯಲ್ಲಿ ಸುತ್ತಿಡಿ:

ನೀರಿಗೆ ಬಿದ್ದ ಮೊಬೈಲನ್ನು ಹೊರತೆಗೆದು ತಕ್ಷಣ ಸ್ವಚ್ಛವಾಗಿರುವ ಹಾಗೂ ನೀರನ್ನು ಚೆನ್ನಾಗಿ ಹೀರುವ ಬಟ್ಟೆಯಿಂದ ಒರೆಸಿಬಿಡಿ. ಫೋನ್ ಆನ್ ಆಗಿದ್ದರೆ, ಅದನ್ನು ಸ್ವಿಚ್ ಆಫ್ ಮಾಡಿಬಿಡಿ. ಬಳಿಕ ಬ್ಯಾಟರಿ, ಸಿಮ್ ಕಾರ್ಡ್, ಮೆಮೊರಿ ಕಾರ್ಡ್, ಹೆಡ್ ಫೋನ್ ಅಥವಾ ಕೇಬಲ್’ಗಳನ್ನು ಪ್ರತ್ಯೇಕಿಸಿ. ಅವುಗಳನ್ನು ಬಟ್ಟೆಯಲ್ಲಿ ಅಥವಾ ಟಿಶ್ಯೂ ಪೇಪರ್’ಗಳಲ್ಲಿ ಸುತ್ತಿಡಿ.

ಅಕ್ಕಿಯ ಚೀಲದಲ್ಲಿ ಹಾಕಿಡಿ:

ಫೋನ್’ನೊಳಗಿರುವ ನೀರಿನ ತೇವಾಂಶವನ್ನು ಹೊರತೆಗೆಯುವುದು ಮುಖ್ಯ. ತೇವಾಂಶ ಹೀರುವ ಸ್ಯಾಚೆಟ್’ಗಳೊಂದಿಗೆ ಏರ್-ಟೈಟ್ ಬಾಕ್ಸ್’ಗಳಲ್ಲಿ ಮೊಬೈಲನ್ನು ಹಾಕಿಟ್ಟರೆ ನೀರಿನಂಶವನ್ನು ಹೊರತೆಗೆಯಲು ಸಹಕಾರಿಯಾಗುತ್ತದೆ.

ಆದರೆ ಎಲ್ಲರ ಬಳಿ ಆ ವ್ಯವಸ್ಥೆ ಎಲ್ಲಾ ಸಮಯದಲ್ಲೂ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆಗ ಪರ್ಯಾಯ ಉಪಾಯವೊಂದಿದೆ. ನೀವು ನಿಮ್ಮ ಮೊಬೈಲ್ ಫೋನನ್ನು ಅಕ್ಕಿಯಿರುವ ಚೀಲದೊಳಗೆ 24-48ಗಂಟೆಗಳ ಕಾಲ ಹಾಕಿಡಿ, ಏಕೆಂದರೆ ಅಕ್ಕಿಯು ನೀರಿನ ತೇವಾಂಶವನ್ನು ಹೀರುವ ಗುಣವನ್ನು ಹೊಂದಿದೆ. ಆದರೆ, ಅದೇ ವೇಳೆ ಒಂದು ವಿಷಯವನ್ನು ಗಮನಿಸಬೇಕು; ಅಕ್ಕಿ ತನ್ನದೇ ಆದ ಧೂಳು/ಪೌಡರನ್ನು ಹೊಂದಿರುತ್ತದೆ. ಅದು ಸ್ಮಾರ್ಟ್ ಫೋನ್’ಗಳಿಗೆ ಒಳ್ಳೆಯದಲ್ಲ.

ಹೇರ್ ಡ್ರೈಯರ್ ಬಳಸಬೇಡಿ:

ನೀರಿನಂಶವನ್ನು ಹೊರತೆಗೆಯಲು ಕೆಲವರು ಹೇರ್ ಡ್ರೈಯರ್ ಮೊರೆ ಹೋಗುತ್ತಾರೆ. ಆ ವಿಧಾನ ಎಂದಿಗೂ ಸರಿಯಲ್ಲ. ಏಕೆಂದರೆ ಹೇರ್ ಡ್ರೈಯರ್ ಹೊರಸೂಸುವ ಬಿಸಿಹವೆಯ ಉಷ್ಣಾಂಶ ಮೊಬೈಲ್’ಗೆ ಸೂಕ್ತವಲ್ಲ. ಅವುಗಳಿಂದಾಗಿ ಮೊಬೈಲ್’ನ ಸೂಕ್ಷ್ಮ ಬಿಡಿಭಾಗಗಳಿಗೆ ಹಾನಿ ಉಂಟಾಗುವ ಸಾಧ್ಯತೆಗಳೇ ಹೆಚ್ಚು. ಮೈಕ್ರೋ ಒವನ್ ಬಗ್ಗೆ ಯೋಚಿಸಲೇ ಬೇಡಿ!.

ಸ್ವಚ್ಛ/ಸಿಹಿ ನೀರಿನಿಂದ ತೊಳೆಯಬೇಡಿ!

ಸಿಹಿನೀರಿನಲ್ಲಿ ಬಿದ್ದ ಪೋನ್’ಗಳನ್ನು ಸರಿಪಡಿಸುವ ಸಾಧ್ಯತೆ ಇರುತ್ತದೆ, ಆದರೆ ಲವಣಗಳಿರುವ ಕಾರಣ ಉಪ್ಪು ನೀರಿನಲ್ಲಿ ಬಿದ್ದ ಫೋನ್ಗಳನ್ನು ಸರಿಪಡಿಸುವ ಸಾಧ್ಯತೆಗಳು ತೀರಾ ವಿರಳ. ಇದರರ್ಥ, ಉಪ್ಪು ನೀರಿಗೆ ಬಿದ್ದ ಫೋನನ್ನು ಸಿಹಿ ನೀರಿನಿಂದ ಒರೆಸುವ ಕೆಲಸ ಖಂಡಿತ ಮಾಡಬೇಡಿ!

ಬ್ಯಾಕಪ್ ತೆಗೆದುಕೊಳ್ಳಿ:

ನೀರಿಗೆ ಬಿದ್ದ ಫೋನ್ ಸ್ವಿಚ್ ಆನ್ ಆಗುವುದು ಬಹಳ ವಿರಳ, ಆದರೆ ನಿಮ್ಮ ಅದೃಷ್ಟ ಚೆನ್ನಾಗಿದ್ದರೆ, ಅದು ಕೆಲವೊಮ್ಮೆ ಆನ್ ಆಗುತ್ತದೆ. ಆಗ ತಕ್ಷಣ ನೀವು ಮಾಡಬೇಕಾದ ಕೆಲಸ, ಫೋನ್’ನಲ್ಲಿರುವ ಡೇಟಾ (ಮಾಹಿತಿ)ಗಳ ವಿವರಗಳನ್ನು ಇನ್ನೊಂದು ಉಪಕರಣದಲ್ಲಿ ಬ್ಯಾಕಪ್ ತೆಗೆದುಕೊಳ್ಳುವುದು. ಏಕೆಂದರೆ ಕೆಲ ಬಿಡಿಭಾಗಗಳು ಸ್ವಲ್ಪ ಅವಧಿಯ ಬಳಿಕ ಕೆಟ್ಟು ಹೋಗುವ ಸಾಧ್ಯತೆಗಳಿರುತ್ತವೆ.

ಕಂಪನಿಗೆ ಸುಳ್ಳು ಹೇಳಬೇಡಿ:

ವ್ಯಾರಂಟಿ ಅಥವಾ ಹಣವನ್ನು ಉಳಿಸುವ ಪ್ರಯತ್ನವಾಗಿ ಕೆಲವರು ಕಸ್ಟಮರ್ ಕೇರ್’ಗೆ ಮೊಬೈಲ್ ಫೋನ್ ನೀರಿಗೆ ಬಿದ್ದಿರುವ ವಿಚಾರವನ್ನು ಗಮನಕ್ಕೆ ತರುವುದಿಲ್ಲ ಅಥವಾ ಸುಳ್ಳು ಹೇಳುತ್ತಾರೆ. ಈ ರೀತಿ ಯಾವತ್ತೂ ಮಾಡಬೇಡಿ, ಏಕೆಂದರೆ ಎಲ್ಲಾ ಫೋನ್’ಗಳಲ್ಲಿ ಸೆನ್ಸರ್’ಗಳನ್ನು ಅಳವಡಿಸಲಾಗಿರುತ್ತದೆ, ನೀರಿಗೆ ಬಿದ್ದಿರುವ ಬಗ್ಗೆ ನೀವು ತಿಳಿಸದಿದ್ದರೂ, ಅದು ತಿಳಿಸುತ್ತದೆ.

Follow Us:
Download App:
  • android
  • ios