ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 52 ಸ್ಥಾನಗಳನ್ನಷ್ಟೇ ಗಳಿಸಿರುವ ಕಾಂಗ್ರೆಸ್, ಅಧಿಕೃತ ಪ್ರತಿಪಕ್ಷದ ಮಾನ್ಯತೆಗಾಗಿ ಹಕ್ಕು ಮಂಡಿಸದೇ ಇರಲು ನಿರ್ಧರಿಸಿದೆ. 

543 ಸದಸ್ಯ ಬಲದ ಲೋಕಸಭೆಯಲ್ಲಿ ಅಧಿಕೃತ ಪ್ರತಿಪಕ್ಷದ ಮಾನ್ಯತೆ ಪಡೆಯಲು ಒಟ್ಟು ಸ್ಥಾನಗಳ ಪೈಕಿ ಶೇ.10ರಷ್ಟು ಅಂದರೆ 54 ಸಂಸದರನ್ನಾದರೂ ಹೊಂದಿರಬೇಕು. 

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 2 ಸ್ಥಾನಗಳಿಂದ ಅಧಿಕೃತ ಪ್ರತಿಪಕ್ಷ ಮಾನ್ಯತೆಯಿಂದ ವಂಚಿತವಾಗಿದೆ. 54 ಸ್ಥಾನ ಗಳಿಸುವವರೆಗೂ ಅಧಿಕೃತ ಪ್ರತಿಪಕ್ಷ ಸ್ಥಾನಕ್ಕೆ ಹಕ್ಕು ಮಂಡನೆ ಮಾಡುವುದಿಲ್ಲ. ಆದಾಗ್ಯೂ ಕಾಂಗ್ರೆಸ್ಸಿಗೆ ಅಧಿಕೃತ ಪ್ರತಿಪಕ್ಷದ ಮಾನ್ಯತೆ ನೀಡಬೇಕೇ ಬೇಡವೇ ಎಂಬ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ ಎಂದು ಕಾಂಗ್ರೆಸ್ಸಿನ ಪ್ರಧಾನ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು. 

2014 ರ ಲೋಕಸಭೆ ಚುನಾವಣೆಯಲ್ಲಿ 44 ಪಕ್ಷಗಳನ್ನು ಗೆದ್ದಿದ್ದ ಕಾಂಗ್ರೆಸ್ ಆಗಲೂ ಅಧಿಕೃತ ಪ್ರತಿಪಕ್ಷದ ಮಾನ್ಯತೆಯನ್ನು ಕಳೆದುಕೊಂಡಿತ್ತು.