ಮೋದಿ ಭೇಟಿ ಮಾಡಬೇಕೆ? 5 ರುಪಾಯಿಯಲ್ಲಿದೆ ಅದೃಷ್ಟ! ನಮೋ ಆ್ಯಪ್‌ನಲ್ಲಿ 5ರಿಂದ 1000 ರು. ದೇಣಿಗೆ ಕೊಡಿ |  ಸಿಗುವ ಕೋಡ್‌ ಅನ್ನು 100 ಮಂದಿಗೆ ಕಳುಹಿಸಿ | ಅವರೂ ದೇಣಿಗೆ ನೀಡಿದರೆ ಮೋದಿ ಭೇಟಿ ಚಾನ್ಸ್‌

ನವದೆಹಲಿ (ನ. 30):  ಕೆಲವು ವೆಬ್‌ಸೈಟ್‌ ಅಥವಾ ಆ್ಯಪ್‌ಗಳ ಲಿಂಕ್‌ ಅನ್ನು ಸ್ನೇಹಿತರಿಗೆ ಕಳುಹಿಸುವ ಮೂಲಕ ಅದರ ಬಗ್ಗೆ ಪ್ರಚಾರ ಮಾಡಿದರೆ ಹಣ ಸಿಗುವುದು ಹಳೆ ವಿಷಯ. ಇದೀಗ ಬಿಜೆಪಿ ಕೂಡ ಇಂತಹುದೇ ಐಡಿಯಾ ಮೊರೆ ಹೋಗಿದೆ. ಪ್ರಧಾನಿ ನರೇಂದ್ರ ಮೋದಿ ಆ್ಯಪ್‌ನಲ್ಲಿ ದೇಣಿಗೆ ನೀಡಿ, ದೇಣಿಗೆ ನೀಡುವಂತೆ ಸ್ನೇಹಿತರಿಗೂ ಪ್ರೋತ್ಸಾಹ ನೀಡುವವರನ್ನು ಸೀದಾ ಮೋದಿ ಮುಂದೆ ಕೂರಿಸಲು ಉದ್ದೇಶಿಸಿದೆ. ಒಟ್ಟಾರೆ ಮೋದಿ ಭೇಟಿಯ ಅದೃಷ್ಟ5 ರು.ನಿಂದ ಆರಂಭವಾಗುತ್ತದೆ.

ಇದಕ್ಕೆ ಮಾಡಬೇಕಾಗಿರುವುದು ಇಷ್ಟೆ: ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದ ನಮೋ ಆ್ಯಪ್‌ನಲ್ಲಿ 5ರಿಂದ 1000 ರು.ವರೆಗೆ ದೇಣಿಗೆ ಕೊಡಬೇಕು. ಆಗ ಒಂದು ರೆಫರಲ್‌ ಕೋಡ್‌ ಲಭಿಸುತ್ತದೆ. ಅದನ್ನು ಇ-ಮೇಲ್‌, ಎಸ್‌ಎಂಎಸ್‌ ಅಥವಾ ವಾಟ್ಸ್‌ಆ್ಯಪ್‌ ಮೂಲಕ 100 ಮಂದಿಗೆ ಕಳುಹಿಸಬೇಕು. ಆ ಸಂದೇಶ ಸ್ವೀಕರಿಸಿದವರೂ ದೇಣಿಗೆ ನೀಡಿದರೆ, ಸಂದೇಶ ರವಾನಿಸಿದ್ದವನಿಗೆ ಮೋದಿಗೆ ಭೇಟಿ ಅವಕಾಶ ಸಿಗಬಹುದು ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಬಿಜೆಪಿ ಈ ಐಡಿಯಾದಿಂದ ಬಿಜೆಪಿಗೆ ಸಂಪನ್ಮೂಲ ಬರುವುದರ ಜತೆಗೆ, ಪ್ರಧಾನಿ ಹಾಗೂ ಶ್ರೀಸಾಮಾನ್ಯರ ಜತೆ ಸಂಪರ್ಕ ಏರ್ಪಡುತ್ತದೆ ಎಂಬುದು ಆ ಪಕ್ಷದ ನಂಬಿಕೆಯಾಗಿದೆ.

ಒಂದು ವೇಳೆ, ರೆಫರಲ್‌ ಕೋಡ್‌ ಅನ್ನು 100 ಮಂದಿ ಬದಲಿಗೆ 10 ಮಂದಿ ಬಳಸಿದರೆ ಟಿ-ಶರ್ಟ್‌, ಕಾಫಿ ಮಗ್‌ನಂತಹ ವಸ್ತುಗಳು ಸಿಗಲಿವೆ.