ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಪರಮಾಪ್ತರಾಗಿರುವ, ಭಾರತದ ಮುಂದಿನ ಅಮೆರಿಕ ರಾಯಭಾರಿ ಎಂತಲೇ ಬಿಂಬಿತವಾಗಿರುವ ಅನಿವಾಸಿ ಭಾರತೀಯ ಉದ್ಯಮಿ ಶಲಭ್‌ ಕುಮಾರ್‌ ಅವರು ಬೆಂಗಳೂರಿನಲ್ಲಿ ಬಂಗಲೆಯೊಂದನ್ನು ಹೊಂದಿರುವ ವಿಷಯ ಬೆಳಕಿಗೆ ಬಂದಿದೆ.

ನವದೆಹಲಿ(ಮಾ.25): ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಪರಮಾಪ್ತರಾಗಿರುವ, ಭಾರತದ ಮುಂದಿನ ಅಮೆರಿಕ ರಾಯಭಾರಿ ಎಂತಲೇ ಬಿಂಬಿತವಾಗಿರುವ ಅನಿವಾಸಿ ಭಾರತೀಯ ಉದ್ಯಮಿ ಶಲಭ್‌ ಕುಮಾರ್‌ ಅವರು ಬೆಂಗಳೂರಿನಲ್ಲಿ ಬಂಗಲೆಯೊಂದನ್ನು ಹೊಂದಿರುವ ವಿಷಯ ಬೆಳಕಿಗೆ ಬಂದಿದೆ.

ಬೆಂಗಳೂರಿನ ಕೆಂಪೇಗೌಡ ಅಂತಾ​ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ಸಾದಹಳ್ಳಿ ಗ್ರಾಮದಲ್ಲಿ ಜೇಡ್‌ ಗಾರ್ಡನ್‌ ಎಂಬ ‘ಗೇಟೆಡ್‌ ವಿಲ್ಲಾ ಕಮ್ಯುನಿಟಿ' ಇದೆ. ಅಲ್ಲಿ ಶಲಭ್‌ ಅವರು ‘ರಾಣಾ ರೇಗನ್‌ ಪ್ಯಾಲೇಜ್‌' ಎಂಬ ಬಂಗಲೆಯನ್ನು ಹೊಂದಿದ್ದಾರೆ. ಕಳೆದ ತಿಂಗಳಷ್ಟೇ ಅವರು ಇಲ್ಲಿಗೆ ಬಿಗಿ ಪೊಲೀಸ್‌ ಭದ್ರತೆಯೊಂದಿಗೆ ಭೇಟಿ ನೀಡಿದ್ದರು ಎಂದು ಆಂಗ್ಲದೈನಿಕ​ವೊಂದು ವರದಿ ಮಾಡಿದೆ.
ರಾಜಸ್ಥಾನದ ಜೈಪುರದ ರಾಮ್‌ಬಾಗ್‌ ಅರಮನೆಯಿಂದ ಪ್ರೇರಿತವಾಗಿ ಈ ಬಂಗಲೆ ನಿರ್ಮಿಸಲಾಗಿದೆ. ಅಮೆ​ರಿಕ ಮಾಜಿ ಅಧ್ಯಕ್ಷ ರೊನಾಲ್ಡ್‌ ರೇಗನ್‌ ಹಾಗೂ ರಾಜಸ್ಥಾನದ ಮೇವಾಡ್‌ ಸಂಸ್ಥಾನದ ರಾಜ ರಾಣಾ ಪ್ರತಾಪ್‌ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಬಂಗಲೆಗೆ ‘ರಾಣಾ ರೇಗನ್‌ ಪ್ಯಾಲೇಸ್‌' ಎಂಬ ಹೆಸರಿಡಲಾಗಿದೆ.

ಅಮೆರಿಕದ ರಿಪಬ್ಲಿಕನ್‌ ಹಿಂದು ಒಕ್ಕೂಟದ ಸಂಸ್ಥಾಪಕರಾಗಿರುವ ಶಲಭ್‌ ಕಳೆದೊಂದು ವರ್ಷದಿಂದ ಟ್ರಂಪ್‌ಗೆ ಆತ್ಮೀಯರು. ‘ಅಬ್‌ಕೀ ಬಾರ್‌ ಟ್ರಂಪ್‌ ಸರ್ಕಾರ್‌' ಎಂಬ ಘೋಷವಾಕ್ಯವನ್ನು ಅಮೆರಿಕ ಚುನಾವಣೆ ವೇಳೆ ಮೊಳಗಿಸಿದ ಕೀರ್ತಿ ಹೊಂದಿದ್ದಾರೆ.

ಪಂಜಾಬ್‌ನಲ್ಲಿ ಜನಿಸಿ, ಬೆಳೆದ ಶಲಭ್‌ ಅವರು 1969ರಲ್ಲಿ ಎಂಜಿನಿ​ಯರಿಂಗ್‌ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದರು. 1981ರಲ್ಲಿ ಅಮೆರಿಕ ಪೌರತ್ವ ಪಡೆದ ಅವರು, ನಾಲ್ಕು ಮಕ್ಕಳ ತಂದೆ. ಶಿಕಾಗೋದಲ್ಲಿ ವಾಸಿಸುತ್ತಿರುವ ಶಲಭ್‌ ಎವಿಜಿ ಗ್ರೂಪ್‌ ಎಂಬ ಎಲೆಕ್ಟ್ರಾನಿಕ್‌ ಪರಿಕರ ವ್ಯವಸ್ಥೆಗಳ ಉತ್ಪಾದನಾ ಹಾಗೂ ಮಾರಾಟ ಕಂಪನಿಯ ಮುಖ್ಯ​ಸ್ಥರಾಗಿದ್ದಾರೆ. ಆ ಕಂಪನಿ ಭಾರತೀಯ ವಿಭಾಗವನ್ನೂ ಹೊಂದಿದ್ದು, ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದೆ.