‘ಅಮೆರಿಕವನ್ನು ಮತ್ತೆ ಶ್ರೇಷ್ಠಗೊಳಿಸಿ’ ಎಂಬ ಘೋಷಣೆಯೊಂದಿಗೆ ಚುನಾವಣಾ ಅಭಿಯಾನ ಆರಂಭಿಸಿದ ಟ್ರಂಪ್, ತಮ್ಮ ವಿರೋಗಳ ವೈಯಕ್ತಿಕ ನಿಂದನೆ, ಜನಾಂಗೀಯ ನಿಂದನೆ ಮತ್ತು ಇದೀಗ ಲೈಂಗಿಕ ಕಿರುಕುಳಗಳ ಆಪಾದನೆಗಳ ಕಾರಣಕ್ಕಾಗಿಯೇ ಜಗತ್ತಿನಾದ್ಯಂತ ಸುದ್ದಿಯಾದರು. ಚುನಾವಣೆ ಸಮೀಪಿಸುತ್ತಿರುವ ನಿರ್ಣಾಯಕ ಘಟ್ಟದಲ್ಲಿ ಟ್ರಂಪ್‌ರ ಚುನಾವಣಾ ಅಭಿಯಾನದುದ್ದಕ್ಕೂ ನೀಡಿದ ವಿವಾದಾತ್ಮಕ ಹೇಳಿಕೆಗಳ ಪಟ್ಟಿ ಇಲ್ಲಿದೆ.

1. ಅತ್ಯಂತ ವಿಶ್ವಾಸನೀಯ ಮೂಲಗಳು ನನ್ನ ಕಚೇರಿಗೆ ಕರೆ ಮಾಡಿ, ಬರಾಕ್ ಒಬಾಮರ ಜನ್ಮ ಪ್ರಮಾಣ ಪತ್ರ ನಕಲಿ ಎಂದು ನನಗೆ ತಿಳಿಸಿದ್ದಾರೆ.

2. ಕ್ರಿಸ್ಟಿನ್ ಸ್ಟೀವಾರ್ಟ್‌ರನ್ನು ರಾಬರ್ಟ್ ಪ್ಯಾಟಿನ್ಸನ್ ಮತ್ತೆ ಹಿಂದಕ್ಕೆ ತೆಗೆದುಕೊಳ್ಳಬಾರದು. ಆಕೆ ಅವರಿಗೆ ನಾಯಿಯಂತೆ ಮೋಸ ಮಾಡಿದ್ದಾಳೆ ಮತ್ತು ಅದನ್ನೇ ಮತ್ತೆ ಮಾಡುತ್ತಾಳೆ, ಕಾದು ನೋಡಿ. ಅವರು ಇನ್ನು ಒಳ್ಳೆ ಕೆಲಸ ಮಾಡಬಹುದು!

3. ಆರಿಯಾನಾ ಹಫಿಂಗ್ಟನ್ ಒಳಗಿಂದ ಹಾಗೂ ಹೊರಗಿಂದಲೂ ಆಕರ್ಷಣೀಯಳಲ್ಲ. ಆಕೆಯ ಹಳೆಯ ಗಂಡ ಆಕೆಯನ್ನು ಬಿಟ್ಟು ಹೋಗಿದ್ದಾನೆ ಎಂಬುದನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲೆ, ಅವರು ಒಳ್ಳೆಯ ನಿರ್ಧಾರವನ್ನೇ ಮಾಡಿದ್ದಾರೆ.

4. ಮಾಧ್ಯಮದವರು ಏನು ಬೇಕಾದರೂ ಬರೆದುಕೊಳ್ಳಲಿ, ಸುಂದರವಾದ ಪೃಷ್ಠವನ್ನು ನಾನು ವರ್ಣಿಸಿಯೇ ವರ್ಣಿಸುತ್ತೇನೆ.

5. ನಾನು ಬೃಹತ್ ಗೋಡೆಯನ್ನು ನಿರ್ಮಿಸುತ್ತೇನೆ. ನನ್ನಷ್ಟು ಒಳ್ಳೆಯ ಗೋಡೆಯನ್ನು ಯಾರು ನಿರ್ಮಿಸಲೂ ಸಾಧ್ಯವಿಲ್ಲ, ದಯವಿಟ್ಟು ನನ್ನನ್ನು ನಂಬಿ. ಅದನ್ನು ತುಂಬಾ ಖರ್ಚು ಇಲ್ಲದೆಯೇ ನಿರ್ಮಿಸುತ್ತೇನೆ. ನಾನು ಮಹಾ ಮಹಾನ್ ಗೋಡೆಯನ್ನು ನಮ್ಮ ದಕ್ಷಿಣ ಗಡಿಯಲ್ಲಿ ನಿರ್ಮಿಸುತ್ತೇನೆ ಮತ್ತು ಅದೆಲ್ಲದಕ್ಕೂ ಮೆಕ್ಸಿಕೊ ಪಾವತಿಸುಂತೆ ಮಾಡುತ್ತೇನೆ, ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ.

6. ಮೆಕ್ಸಿಕೊ ಜನರನ್ನು ಕಳುಹಿಸುವಾಗ ಒಳ್ಳೆಯ ಜನರನ್ನು ಕಳುಹಿಸುವುದಿಲ್ಲ. ತುಂಬಾ ಸಮಸ್ಯೆಗಳಿರುವವರನ್ನು ಅವರು ಕಳುಹಿಸುತ್ತಾರೆ. ಅವರು ಡ್ರಗ್ಸ್ ತರುತ್ತಾರೆ. ಅವರು ಅತ್ಯಾಚಾರಿಗಳು, ನನ್ನ ಪ್ರಕಾರ ಕೆಲವು ಜನರು ಮಾತ್ರ ಒಳ್ಳೆಯವರು.

7. ಒಂದು ವೇಳೆ ನಾನು ‘ದ ವೀವ್’ ನಡೆಸುತ್ತಿದ್ದರೆ, ರೋಸಿ ಓಡೊನ್ನೆಲ್‌ರನ್ನು ಕೆಲಸದಿಂದ ತೆಗೆದು ಹಾಕುತ್ತಿದ್ದೆ. ಅಂದರೆ, ನಾನು ಆಕೆಯ ದಪ್ಪ, ಕುರೂಪಿ ಮುಖವನ್ನು ನೋಡಿ, ‘ರೋಸಿ ನಿನ್ನನ್ನು ಕೆಲಸದಿಂದ ತೆಗೆಯಲಾಗಿದೆ’ ಎಂದು ಹೇಳುತ್ತಿದ್ದೆ.

8. ‘ದ ಅಪ್ರೆಂಟೈಸ್’ ಕಾರ್ಯಕ್ರಮದಲ್ಲಿದ್ದ ಎಲ್ಲ ಮಹಿಳೆಯರೂ ಗೊತ್ತಿದ್ದೂ, ಗೊತ್ತಿಲ್ಲದೆಯೂ ಕುಚೋದ್ಯದಲ್ಲಿ ನಿರತರಾಗಿದ್ದರು. ಅದು ನಿರೀಕ್ಷಿತವಾಗಿತ್ತು.

9. ನನ್ನ ಸೌಂದರ್ಯವೆಂದರೆ, ನಾನು ಅತ್ಯಂತ ಶ್ರೀಮಂತನಾಗಿರುವುದು.

10. ಇವಾಂಕಾ ನನ್ನ ಮಗಳಾಗಿಲ್ಲದಿರುತ್ತಿದ್ದರೆ, ಬಹುಷಃ ನಾನು ಆಕೆಯೊಂದಿಗೆ ಡೇಟಿಂಗ್ ಬಯಸುತ್ತಿದ್ದೆ ಎಂದು ಹೇಳುತ್ತಿದ್ದೆ.

11. ನನ್ನ ಹಾಗೂ ಪ್ರತಿಸ್ಪರ್ಧಿ (ಹಿಲರಿ ಕ್ಲಿಂಟನ್) ನಡುವಿನ ವ್ಯತ್ಯಾಸವೇನೆಂದರೆ, ನಾನು ಪ್ರಾಮಾಣಿಕ ಮತ್ತು ನನ್ನ ಮಹಿಳೆಯರು ತುಂಬಾ ಸುಂದರಿಯರು.

12. ನನಗೆ ಹಲವಾರು ಉತ್ತಮ ಸಲಿಂಗಿ ಸ್ನೇಹಿತರಿದ್ದಾರೆ, ಆದರೆ ನಾನು ಮಾತ್ರ ಸಂಪ್ರದಾಯವಾದಿ.

13. ಮಹಿಳಾ ಕಾರ್ಡ್ (ಹಿಲರಿ ಕ್ಲಿಂಟನ್) ಒಂದೇ ಬಾಕಿಯುಳಿದಿದೆ, ಹಿಲರಿ ಪುರುಷನಾಗಿದ್ದರೆ, ಆಕೆಗೆ ಶೇ. 5 ಓಟು ಕೂಡ ಸಿಗುತ್ತಿರಲಿಲ್ಲ.

14. ಇಸ್ಲಾಂ ನಮ್ಮನ್ನು ದ್ವೇಷಿಸುತ್ತದೆ ಎಂದು ನನಗನಿಸುತ್ತಿದೆ. ಅವರಲ್ಲಿ ತುಂಬಾ ದ್ವೇಷವಿದೆ, ನಾವು ಅದರ ಆಳಕ್ಕಿಳಿಯಬೇಕು. ನಮ್ಮ ಬಗ್ಗೆ ನಂಬಲಸಾಧ್ಯವಾದಷ್ಟು ದ್ವೇಷವಿದೆ.

15. 9/11 ದಾಳಿಯ ಸಂದರ್ಭ ಕಟ್ಟಡ ಉರುಳುವಾಗ ಅಲ್ಲಿ ಸಾವಿರಾರು ಜನರು ಹರ್ಷೋದ್ಘಾರ ಮಾಡುತ್ತಿದ್ದರು.