ವಾಷಿಂಗ್ಟನ್(ಸೆ.08): ಮಹತ್ವದ ಬೆಳವಣಿಗೆಯೊಂದರಲ್ಲಿ ತಾಲಿಬಾನ್’ನೊಂದಿಗೆ ಶಾಂತಿ ಒಪ್ಪಂದ ರದ್ದಪಡಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.  

ಕಾಬೂಲ್’ನಲ್ಲಿ ಇತ್ತೀಚೆಗೆ ನಡೆದ ದಾಳಿಯಲ್ಲಿ ಅಮೆರಿಕ ಯೋಧನೋರ್ವ ಸಾವನ್ನಪ್ಪಿದ್ದು, ದಾಳಿಯ ಹೊಣೆ ಹೊತ್ತ ತಾಲಿಬಾನ್ ಜೊತೆ ಶಾಂತಿ ಮಾತುಕತೆ ರದ್ದುಪಡಿಸಿರುವುದಾಗಿ ಟ್ರಂಪ್ ತಿಳಿಸಿದ್ದಾರೆ. 

ಇದೇ ವೇಳೆ ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂಪಡೆಯುವ (ಕ್ಯಾಂಪ್ ಡೇವಿಡ್)ಒಪ್ಪಂದವನ್ನು ಅಮೆರಿಕ ರದ್ದುಪಡಿಸಿದ್ದಾಗಿ ಬಿಬಿಸಿ ನ್ಯೂಸ್ ವರದಿ ಮಾಡಿದೆ. 

ಅಮೆರಿಕದ ಸಂಧಾನಕಾರ ಜಲ್ಮೇ ಖಲೀಲ್ ಜಾದ್ ಕಳೆದ ಸೋಮವಾರ ತಾಲಿಬಾನ್ ಜೊತೆ ಶಾಂತಿ ಒಪ್ಪಂದವನ್ನು ತಾತ್ವಿಕವಾಗಿ ಘೋಷಿಸಿದ್ದರು. ಕತಾರ್’ ರಾಜಧಾನಿ ದೋಹಾದಲ್ಲಿ ನಡೆದ ಅಮೆರಿಕ ಮತ್ತು ತಾಲಿಬಾನ್ ಪ್ರತಿನಿಧಿಗಳ ನಡುವಿನ 9 ಸುತ್ತಿನ ಮಾತುಕತೆಯ ನಂತರ ಈ ಘೋಷಣೆ ಹೊರಡಿಸಲಾಗಿತ್ತು. 

ಆದರೆ ಕಾಬೂಲ್ ದಾಳಿಯ ಬಳಿಕ ಅಫ್ಘಾನಿಸ್ತಾನದೊಂದಿಗೆ ಶಾಂತಿ ಮಾತುಕತೆ ರದ್ದುಪಡಿಸಿರುವುದಾಗಿ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. 

ತಾಲಿಬಾನ್ ನಡೆಸಿದ ಕಾಬೂಲ್ ಕಾರ್ ಬಾಂಬ್ ದಾಳಿಯಲ್ಲಿ ಅಮೆರಿಕ ಸೈನಿಕ ಸೇರಿದಂತೆ 12 ಜನರು ಸಾವನ್ನಪ್ಪಿದ್ದರು.