ಭೋಪಾಲ್‌ [ಜು.24]: ಅತ್ತ ಕರ್ನಾಟಕದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಕೂಟದ ಸರ್ಕಾರ ಬಿದ್ದ ಬೆನ್ನಲ್ಲೇ, ಇತ್ತ ಮಧ್ಯಪ್ರದೇಶದಲ್ಲೂ ಅದೇ ರೀತಿಯ ಲಕ್ಷಣದ ಸುಳಿವನ್ನು ಬಿಜೆಪಿ ನೀಡಿದೆ. ಕರ್ನಾಟಕದಲ್ಲಿ ಸರ್ಕಾರ ಉರುಳಿಬಿದ್ದ ಬೆನ್ನಲ್ಲೇ ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್‌ಸಿಂಗ್‌ ಚೌಹಾಣ್‌, ರಾಜ್ಯದಲ್ಲೇನಾದರೂ ಸರ್ಕಾರ ಉರುಳಿಬಿದ್ದರೆ ನಮ್ಮನ್ನು ದೂರಬೇಡಿ ಎಂದು ಮುಖ್ಯಮಂತ್ರಿ ಕಮಲ್‌ನಾಥ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಿದೆ. ಮತ್ತೊಂದೆಡೆ ಸರ್ಕಾರಕ್ಕೆ ಬೆಂಬಲ ನೀಡಿರುವ ಬಿಎಸ್‌ಪಿ- ಎಸ್‌ಪಿ ಕೂಡಾ ಅದೇ ಹಾದಿಯಲ್ಲಿದೆ. ಹೀಗಾಗಿ ಸರ್ಕಾರಕ್ಕೆ ಏನಾದರೂ ಆದರೆ ಮುಂದೆ ನಮ್ಮನ್ನು ದೂರಬೇಡಿ ಎಂದು ಚೌಹಾಣ್‌ ಹೇಳಿದ್ದಾರೆ.

231 ಸದಸ್ಯಬಲದ ಮಧ್ಯಪ್ರದೇಶದ ವಿಧಾನಸಭೆಯಲ್ಲಿ ಕಾಂಗ್ರೆಸ್‌ 114 ಸ್ಥಾನ ಗೆದ್ದಿದೆ. ಸರ್ಕಾರಕ್ಕೆ ಬಿಎಸ್‌ಪಿಯ 2, ಎಸ್‌ಪಿಯ ಇಬ್ಬರು, ನಾಲ್ವರು ಪಕ್ಷೇತರರು ಬೆಂಬಲ ಸೂಚಿಸಿದ್ದಾರೆ. ಬಿಜೆಪಿ 108 ಸ್ಥಾನ ಗೆದ್ದಿದೆ. ಇಬ್ಬರು ಪಕ್ಷೇತರರು ಪ್ರತ್ಯೇಕವಾಗಿದ್ದಾರೆ. ಬಹುಮತಕ್ಕೆ 116 ಸ್ಥಾನ ಬೇಕು.