ವಿವಾದಿತ ಸ್ಥಳದಿಂದ 10 ಕಿಮೀ ದೂರದಲ್ಲಿ ಚೀನಾ ರಸ್ತೆ ಕಾಮಗಾರಿ | ಸೇನಾಪಡೆ ಬಳಸಿ ಹಾಲಿ ಇರುವ ರಸ್ತೆ ವಿಸ್ತರಿಸುವ ಕಾರ್ಯಕ್ಕೆ ಚಾಲನೆ

ನವದೆಹಲಿ: ಸಿಕ್ಕಿಂ ಸಮೀಪದ ಗಡಿ ಪ್ರದೇಶ ಡೋಕ್ಲಾಮ್‌ನಲ್ಲಿ ಭಾರತ ಮತ್ತು ಚೀನಾ ನಡುವೆ ಬಿಕ್ಕಟ್ಟು ಅಂತ್ಯಗೊಂಡು ಎಲ್ಲವೂ ಸರಿಹೋಯಿತು ಎನ್ನುವಷ್ಟರಲ್ಲೇ ಚೀನಾ ಮತ್ತೆ ಕ್ಯಾತೆ ತೆಗೆದಿದೆ. ವಿವಾದಿತ ಡೋಕ್ಲಾಮ್‌ನಿಂದ ಕೇವಲ 10 ಕಿ.ಮೀ. ದೂರದಲ್ಲಿ ಚೀನಾ ಸೇನೆ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದೆ.

ಕಳೆದ ಜೂನ್‌ನಲ್ಲಿ ಭಾರತದ ಸೈನಿಕರು, ಸಿಕ್ಕಿಂ ಗಡಿ ಸಮೀಪದ ‘ಚಿಕನ್ಸ್ ನೆಕ್’ ಪ್ರದೇಶದಲ್ಲಿ ಚೀನಾದ ರಸ್ತೆ ನಿರ್ಮಾಣ ಕಾಮಗಾರಿಗೆ ತಡೆಯೊಡ್ಡಿದ್ದರು. ಆ ಬಳಿಕ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಏರ್ಪಟ್ಟು ಉಭಯ ದೇಶಗಳು ಗಡಿಯಲ್ಲಿ ಸೇನೆಯನ್ನು ನಿಯೋಜಿಸಿದ್ದವು.

70 ದಿನಗಳ ಸಂಘರ್ಷದ ಬಳಿಕ ಬಿಕ್ಕಟ್ಟು ಅಂತ್ಯಗೊಂಡಿತ್ತು. ಚೀನಾ ತನ್ನ ಬುಲ್ಡೋಜರ್‌ಗಳನ್ನು ಮತ್ತು ರಸ್ತೆ ನಿರ್ಮಾಣ ಉಪಕರಣಗಳನ್ನು ಹಿಂದಕ್ಕೆ ಪಡೆದುಕೊಂಡಿದೆ ಎಂದು ಭಾರತದ ಅಧಿಕಾರಿಗಳು ಹೇಳಿದ್ದರು.

ಆದರೆ, ವಾತಾವರಣ ಸೂಕ್ತವಾಗಿ ಇಲ್ಲದ ಕಾರಣಕ್ಕಾಗಿ ಕಾಮಗಾರಿ ನಿಲ್ಲಿಸಿದ್ದಾಗಿ ಚೀನಾ ಹೇಳಿ ಕೊಂಡಿತ್ತು. ಆದರೆ, ಇದೀಗ ಡೋಕ್ಲಾಮ್ ಬಿಕ್ಕಟ್ಟು ಸೃಷ್ಟಿಯಾದ ಪ್ರದೇಶದಿಂದ 10 ಕಿ.ಮೀ. ದೂರದಲ್ಲಿ, ಹಾಲಿ ಇರುವ ರಸ್ತೆಯನ್ನು ವಿಸ್ತರಿಸುವ ಕಾರ್ಯಕ್ಕೆ ಚೀನಾ ಚಾಲನೆ ನೀಡಿದೆ.

ಈ ಮೂಲಕ ವಿವಾದಿತ ಡೋಕ್ಲಾಮ್ ಪ್ರಸ್ಥಭೂಮಿ ತನಗೆ ಸೇರಿದ್ದೆಂದು ಪ್ರತಿಪಾದಿಸುವ ಕೆಲಸಕ್ಕೆ ಮತ್ತೆ ಕೈ ಹಾಕಿದೆ. ಈ ಹಿಂದೆ ಡೋಕ್ಲಾಮ್‌ನಲ್ಲಿ ರಸ್ತೆ ನಿರ್ಮಾಣಕ್ಕೆ ಬಳಸಿದ್ದ ರಸ್ತೆ ನಿರ್ಮಾಣದ ಸಾಮಗ್ರಿಗಳನ್ನು ಡೋಕ್ಲಾಮ್‌ನಿಂದ ಉತ್ತರ ಮತ್ತು ಪಶ್ಚಿಮಕ್ಕೆ ಸಾಗಿಸಿದೆ.

ಅಲ್ಲಿಗೆ ರಸ್ತೆ ನಿರ್ಮಾಣ ಕೆಲಸಗಾರರನ್ನು ಕರೆಸಿಕೊಳ್ಳಲಾಗಿದ್ದು, ಕಾಮಗಾರಿಯ ಮೇಲುಸ್ತುವಾರಿಗೆ ಸುಮಾರು 500 ಸೈನಿಕರನ್ನು ನಿಯೋಜಿಸಲಾಗಿದೆ. ಆದರೆ, ಈ ಯೋಧರು ಶಾಶ್ವತವಾಗಿ ನಿಯೋಜಿಸಲ್ಪಟ್ಟವರೇ ಎಂಬ ಬಗ್ಗೆ ಸುಳಿವು ಲಭ್ಯವಾಗಿಲ್ಲ.

ಚೀನಾದ ಯತಂಗ್ ಪಟ್ಟಣ, ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿರುವ ಸ್ಥಳದಿಂದ 20 ಕಿ.ಮೀ.ಗಿಂತಲೂ ಸಮೀಪದಲ್ಲಿದ್ದು, ಯೋಧರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸಲು ಕೆಲವೇ ಗಂಟೆಗಳು ಸಾಕು. ಹೀಗಾಗಿ ಯೋಧರಿಗಾಗಿ ರಸ್ತೆ ನಿರ್ಮಾಣ ಮಾಡಬೇಕಾದ ಅಗತ್ಯ ಚೀನಾಕ್ಕೆ ಇಲ್ಲ. ಆದರೆ, ಡೋಕ್ಲಾಮ್ ಪ್ರದೇಶ ತನಗೆ ಸೇರಿದ್ದೆಂದು ಪ್ರತಿಪಾದಿಸುವ ಸಲುವಾಗಿಯೇ ಚೀನಾ ರಸ್ತೆ ನಿರ್ಮಾಣ ಕಾರ್ಯ ಮಾಡುತ್ತಿದೆ ಎಂದು ಭಾರತದ ಸೇನಾ ಅಧಿಕಾರಿಗಳು ರಾಷ್ಟ್ರೀಯ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.