ಒಂದಡೆ ವರುಣ ಆರ್ಭಟಕ್ಕೆ ರಾಜಧಾನಿ ಜನರು ರೋಸಿ ಹೋದರೆ, ಇದರ ಮಧ್ಯೆ ಮನೆಯ ಮುಂದೆ, ಬೀದಿ ಬದಿಯಲ್ಲಿ ನಾಯಿಗಳ ಕಾಟದಿಂದ ಬೆಚ್ಚಿ ಬೀಳುವಂತೆ ಮಾಡಿದೆ. ಹಾಗಿದ್ದರೆ ಬಿಬಿಎಂಪಿ ಅಧಿಕಾರಿಗಳು, ನಾಯಿ ಹಿಡಿಯುವ ಗುತ್ತಿಗೆ ಪಡೆದವರು ಏನು ಮಾಡ್ತಿದ್ದಾರೆ? ನಾಯಿ ಹಿಡಿಯಲು ಪಾಲಿಕೆ ವ್ಯಯಿಸುವ ಹಣ ಎಷ್ಟು ಗೊತ್ತಾ...? ಈ ಸ್ಟೋರಿ ನೋಡಿ

ಬೆಂಗಳೂರು(ಅ.09): ಕಳೆದ ಅಗಸ್ಟಲ್ಲಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆ ಬಳಿ ನಾಯಿಗಳು ದಾರಿ ಹೋಕರ ಮೇಲೆ ಮಾಡಿದ ಭಯಾನಕ ದಾಳಿ ಭಾರೀ ಸದ್ದು ಮಾಡಿತ್ತು. ದಾಳಿಗೊಳಗಾದವರು ಇನ್ನೂ ಆ ಆಘಾತದಿಂದ ಚೇತರಿಸಿಕೊಂಡಿಲ್ಲ.

ಇಂಥಾ ಭಯಾನಕ ದಾಳಿಗಳು ಹೈಟೆಕ್​ ಸಿಟಿ ಬೆಂಗಳೂರಿನಲ್ಲಿ ಪದೇ ಪದೇ ನಡೆಯುತ್ತಲೇ ಇವೆ. ಇದಕ್ಕೆ ಕಾರಣ ಏನು ಗೊತ್ತಾ? ಹೆಚ್ಚುತ್ತಿರೋ ಬೀದಿನಾಯಿಗಳ ಸಂಖ್ಯೆ. ದುರಂತ ಅಂದ್ರೆ ಬೀಡಿ ನಾಯಿಗಳ ನಿಯಂತ್ರಣಕ್ಕೆ ಬಿಬಿಎಂಪಿ ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತೆ. ಆದ್ರೆ ನಾಯಿ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಯಾಕೆ ಅಂತ ತಿಳಿಯಲು ಸುವರ್ಣ ನ್ಯೂಸ್​ ರಿಯಾಲಿಟಿ ಚೆಕ್​ ಮಾಡಿದಾಗ ಬಿಬಿಎಂಪಿಯಲ್ಲಿ ನಾಯಿ ಹೆಸರಲ್ಲಿ ನಡೀತಿರೋ ಬಹುಕೋಟಿ ಹಗರಣ ಬಯಲಾಗಿದೆ.

5.92 ಲಕ್ಷ ನಾಯಿಗಳಿಗೆ ಶಸ್ತ್ರಚಿಕಿತ್ಸೆ: ಪಾಲಿಕೆಯಿಂದ ಬರೋಬ್ಬರಿ 31.84 ಕೋಟಿ ಖರ್ಚು

ಬಿಬಿಎಂಪಿ ಲೆಕ್ಕದ ಪ್ರಕಾರ 2000-01ರಿಂದ 2017-18ರ ಮೇ ತಿಂಗಳವರೆಗೆ 5,92,144 ಲಕ್ಷ ನಾಯಿಗಳನ್ನು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ.ಇದಕ್ಕಾಗಿ ಬರೋಬ್ಬರಿ 31.76 ಕೋಟಿ ರೂ. ಖರ್ಚು ಮಾಡಿದೆ. ಆದರೂ, ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಬಂದಿಲ್ಲ.

ಬೀದಿ ನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಜವಾಬ್ದಾರಿ ಹೊತ್ತಿರೋ ಎನ್'​ಜಿಓಗಳು ನಾಯಿ ಹಿಡಿಯದೇ ಭರ್ಜರಿ ಹಣ ಲೂಟಿ ಹೊಡೀತಿವೆ. ಇದು ನಮ್ಮ ರಿಯಾಲಿಟಿ ಚೆಕ್​ನಲ್ಲಿ ಬಯಲಾಗಿದೆ. ನಾವು ಬೆಂಗಳೂರು ಪಶ್ಚಿಮ ಹಾಗೂ ದಕ್ಷಿಣ ಭಾಗದಲ್ಲಿ ನಾಯಿ ಹಿಡಿಯುವವರಿಗೆ ಕರೆ ಮಾಡಿ ನಾಯಿ ಹಿಡಿಯಲು ಮನವಿ ಮಾಡಿದ್ರೆ ಅವರು ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ.

ಬೀದಿ ನಾಯಿ ಹಿಡಿಯಬೇಕಾದ ಎನ್'​ಜಿಓಗಳ ಬೇಜವಾಬ್ದಾರಿತನದಿಂದ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಬೇಕಾದ ನಾಯಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಬಗ್ಗೆ ಮೇಯರ್ ಅವರನ್ನ ಪ್ರಶ್ನಿಸಿದಾಗ 'ನಾವು ಸಂಬಂಧಪಟ್ಟ ಻ಧಿಕಾರಿಗಳ ಬಳಿ ಮಾತನಾಡಿದ್ದೇವೆ. ವರದಿ ನೀಡಲು ಸೂಚಿಸಿದ್ದೇವೆ. ಈ ಕುರಿತಾಗಿ ಇಂದಿನ ಸಭೆಯಲ್ಲಿ ಚರ್ಚಿಸಲಿದ್ದೇವೆ' ಎಂದಿದ್ದಾರೆ.

ಹಾಗಾದ್ರೆ ಬಿಬಿಎಂಪಿಯಲ್ಲಿ ನಾಯಿ ಹೆಸರಲ್ಲಿ ಕೋಟಿ ಕೋಟಿ ಲೂಟಿಯಾಗಿರುವುದು ಸ್ಪಷ್ಟ. ಜನರ ತೆರಿಗೆ ನುಂಗಿ ನೀರು ಕುಡೀತಿರೋ ಬಿಬಿಎಂಪಿ ಅಧಿಕಾರಿಗಳು ಮತ್ತು ಭ್ರಷ್ಟ ಎನ್'​ಜಿಓಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಾಗಿದೆ.