ನವದೆಹಲಿ(ಆ.02): ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೋಮಾಂಚನ ಎನ್ನಬಹುದಾದ ಘಟನೆ ಇದೇ ಆ.15ರಂದು ನಡೆಯುವ ಸಾಧ್ಯತೆ ಇದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಹೆಚ್ಚುವರಿ ಸೇನೆ ನಿಯೋಜಿಸುತ್ತಿದ್ದು, ಇದರ ಕಾರಣ ಕುರಿತು ಇದೀಗ ವಿಶೇಷ ಚರ್ಚೆ ಶುರುವಾಗಿದೆ . 

ಇದೇ ಆ.15ರ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಪ್ರಧಾನಿ ಮೋದಿ ಕಣಿವೆ ರಾಜ್ಯದ ರಾಜಧಾನಿ ಶ್ರೀನಗರದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈವರೆಗಿನ ಸಿದ್ಧ ಸಂಪ್ರದಾಯ ಬದಿಗಿರಿಸಿ ಮೋದಿ ಶ್ರೀನಗರದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದು, ಇದೇ ಕಾರಣಕ್ಕೆ ಕಣಿವೆ ರಾಜ್ಯಕ್ಕೆ ಹೆಚ್ಚುವರಿ ಸೇನೆ ನಿಯೋಜನೆ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯ ಕಾಶ್ಮೀರಕ್ಕೆ 38 ಸಾವಿರ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿರುವುದು ಈ ವಾದಕ್ಕೆ ಇಂಬು ನೀಡಿದೆ.

ಪ್ರತ್ಯೇಕತಾವಾದದ ಧ್ವನಿ ಪ್ರಬಲವಾಗಿರುವ ಕಾಶ್ಮೀರದಲ್ಲಿ ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜಾರೋಹಣ ಮಾಡಿದರೆ, ವಿರೋಧಿಗಳಿಗೆ ಬಲವಾದ ಸಂದೇಶ ರವಾನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಧ್ವಜಾರೋಹಣ ನೆರವೇರಿಸಲು ಮೋದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಅಲ್ಲದೇ ಕಣಿವೆಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ಹಾಗೂ 35(ಎ)ಕಲಂ ರದ್ದತಿಗೂ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದ್ದು, ಇದೇ ಹಿನ್ನೆಲೆಯಲ್ಲಿ ಹೆಚ್ಚುವರಿ ಸೇನೆ ನಿಯೋಜಿಸಿದೆ ಎಂಬ ಮಾತುಗಳಿಗೂ ಬರವಿಲ್ಲ.