Asianet Suvarna News Asianet Suvarna News

ಚುನಾವಣೆಗೂ ಮುನ್ನ ಮೋದಿ ಸಾಲ ಮನ್ನಾ ಮಾಡ್ತಾರಾ?

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಸೋಲಿಗೆ ಕಾರಣ ಏನು ಎಂಬ ಪರಾಮರ್ಶೆಯೂ ನಡೆಯುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ 4 ಲಕ್ಷ ಕೋಟಿ ರು. ಕೃಷಿ ಸಾಲ ಮನ್ನಾಕ್ಕೆ ಚಿಂತಿಸುತ್ತಿದೆ ಎಂಬ ವರದಿಯಾಗುತ್ತಿದೆ. 

ಸಾಲ ಮನ್ನಾ ಎಂಬುದು ಕೃಷಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರವೇ? ಇತ್ಯಾದಿ ವಿವರ ಇಲ್ಲಿದೆ.

Does Modi to work on Plan to Wave Off Farmers Loans?
Author
Bengaluru, First Published Dec 15, 2018, 5:13 PM IST

ನವದೆಹಲಿ (ಡಿ. 15): ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಸೋಲಿಗೆ ಕಾರಣ ಏನು ಎಂಬ ಪರಾಮರ್ಶೆಯೂ ನಡೆಯುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ 4 ಲಕ್ಷ ಕೋಟಿ ರು. ಕೃಷಿ ಸಾಲ ಮನ್ನಾಕ್ಕೆ ಚಿಂತಿಸುತ್ತಿದೆ ಎಂಬ ವರದಿಯಾಗುತ್ತಿದೆ. ಅತ್ತ ಚುನಾವಣೆಗೂ ಮೊದಲು ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ 10 ದಿನದ ಒಳಗೆ ಹೇಗೆ ಸಾಲ ಮನ್ನಾ ಮಾಡುತ್ತದೆ ಎಂಬ ಕುತೂಹಲವೂ ಹೆಚ್ಚುತ್ತಿದೆ.

ಈ ಹಿನ್ನೆಲೆಯಲ್ಲಿ ಸಾಲಮನ್ನಾ ‘ಸಂಸ್ಕೃತಿ’ ಆರಂಭವಾಗಿದ್ದು ಯಾವಾಗ? ದೇಶದಲ್ಲಿ ಕೃಷಿ ವಲಯದ ಸುಸ್ತಿ ಸಾಲ ಎಷ್ಟು? ಸಾಲ ಮನ್ನಾ ಎಂಬುದು ಕೃಷಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರವೇ? ಇತ್ಯಾದಿ ವಿವರ ಇಲ್ಲಿದೆ.

ದೇಶಾದ್ಯಂತ ರೈತರು ಸಂಕಷ್ಟದಲ್ಲಿ; ಸಾಲ ಮನ್ನಾ ಕುರಿತು ನಿರೀಕ್ಷೆ

2014 ಮತ್ತು 2015  ರ ಬರ ಕೃಷಿ ವಲಯದ ಮೇಲೆ ಪ್ರಹಾರ ಮಾಡಿತ್ತು. ಸರ್ಕಾರಗಳ ಕ್ರಮದ ಹೊರತಾಗಿಯೂ ಕೃಷಿಕರಿಗೆ ಬರ ಸಾಕಷ್ಟು ಹೊಡೆತ ನೀಡಿದೆ. ಜೊತೆಗೆ ರೈತರು ಬೆಳೆದಿರುವ ಬೆಳೆಗಳಿಗೆ ಬೆಲೆಯೂ ಕುಸಿದಿದೆ. ಸದ್ಯ ಈರುಳ್ಳಿ ಬೆಲೆ ಪಾತಾಳ ಮುಟ್ಟಿದೆ. ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕೆಲವೇ ಕೆಲ ರೈತರು ಮಾತ್ರ ನ್ಯಾಯಯುತವಾಗಿ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಜೊತೆಗೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ ಅನೇಕ ಕಾರಣಗಳಿಂದಾಗಿ ಮುನ್ನೆಲೆಗೆ ಬರುತ್ತಿಲ್ಲ. ಇವೆಲ್ಲದರ ಒಟ್ಟು ಪರಿಣಾಮದಿಂದಾಗಿ ರೈತರ ಬದುಕೇ ಸಂಕಷ್ಟಕ್ಕೆ ಸಿಲುಕಿದೆ. ಸಾಲಮನ್ನಾ ಈ ಎಲ್ಲ ಸಮಸ್ಯೆಗಳಿಂದ ತಮ್ಮನ್ನು ಹೊರತರುವುದೇನೋ ಎಂಬ ನಿರೀಕ್ಷೆಯಲ್ಲಿ ರೈತರು ಸರ್ಕಾರಗಳ ಎದುರು ನೋಡುತ್ತಿದ್ದಾರೆ. 

ಚುನಾವಣೆಗೂ ಮುನ್ನ ಮೋದಿ ಸಾಲ ಮನ್ನಾ ಮಾಡ್ತಾರಾ?

ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಣೆಯ ಬೆನ್ನಲ್ಲೇ ಬಿಜೆಪಿ ಎಚ್ಚೆತ್ತಂತೆ ತೋರುತ್ತಿದ್ದು, ಈ ಎಲ್ಲ ರಾಜ್ಯಗಳಲ್ಲಿ ಪಕ್ಷದ ಸೋಲಿಗೆ ರೈತರ ಸಮಸ್ಯೆಗಳು ಕಾರಣ ಎಂಬುದನ್ನು ಮನಗಂಡಂತಿದೆ. ಈ ಹಿನ್ನೆಲೆಯಲ್ಲಿ ಸುಮಾರು 26 ಕೋಟಿ ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ 4 ಲಕ್ಷ ಕೋಟಿ ರುಪಾಯಿ ಸಾಲ ಮನ್ನಾ ಮಾಡಲು ಮೋದಿ ಸರ್ಕಾರ ಗಂಭೀರವಾಗಿ ಚಿಂತನೆ ಆರಂಭಿಸಿದೆ ಎಂದು ಹೇಳಲಾಗುತ್ತಿದೆ.

ಮೋದಿ ಸರ್ಕಾರ ಜಾರಿಗೆ ತಂದ ಯೋಜನೆಗಳು ತತಕ್ಷಣ ಫಲ ನೀಡುವುದಿಲ್ಲ. ಆದರೆ ಮುಂದಿನ ಚುನಾವಣೆ ಒಳಗೆ ರೈತರನ್ನು ಸೆಳೆಯುವ ಕ್ರಮ ರೂಪಿಸಲೇಬೇಕಾದ ಅನಿವಾರ್ಯತೆ ಮೋದಿ ಸರ್ಕಾರಕ್ಕಿದ್ದಂತಿದೆ. ಪ್ರಸಕ್ತ ಸಾಲಿನಲ್ಲಿ ಅಂದಾಜು ₹6..67 ಲಕ್ಷ ಕೋಟಿ ವಿತ್ತೀಯ ಕೊರತೆ ಇದೆ. ಇದು ಜಿಡಿಪಿಯ ಶೇ.3.5 ರಷ್ಟು . 

ಒಂದೊಮ್ಮೆ ನರೇಂದ್ರ ಮೋದಿ 2019 ರಲ್ಲಿ ಪುನಃ ಅಧಿಕಾರಕ್ಕೆ ಬರುವ ತವಕದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲಮನ್ನಾ ಮಾಡಿದರೆ ವಿತ್ತೀಯ ಕೊರತೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಜೊತೆಗೆ ಈಗಾಗಲೇ ₹10.5 ಲಕ್ಷ ಕೋಟಿ ಸಾಲ ಬಾಕಿ ಇರುವ ದೇಶದ ಸರ್ಕಾರಿ ಬ್ಯಾಂಕ್‌ಗಳಿಗೆ ಮತ್ತಷ್ಟು ಹೊರೆ ಬೀಳಲಿದೆ. ದೇಶದ ಅರ್ಥವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. 

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಸಾಲಮನ್ನಾ ಸವಾಲು

ಸಾಲಮನ್ನಾ ಭರವಸೆ ಸದ್ಯದ ಚುನಾವಣಾ ಪ್ರಣಾಳಿಕೆಯ ಪ್ರಮುಖ ಅಂಶವಾಗಿ ಮಾರ್ಪಡುತ್ತಿದೆ. 2019 ರ ಚುನಾವಣೆಯ ಸೆಮಿಫೈನಲ್ ಎಂದೇ ಕರೆಯಲಾದ ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ರೈತರ 2 ಲಕ್ಷ ರು. ವರೆಗಿನ ಸಾಲಮನ್ನಾ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಈ ಹೇಳಿಕೆ ಬಳಿಕ ರೈತರು ಸಾಲದ ಕಂತು ಕಟ್ಟುವುದನ್ನೇ ಬಿಟ್ಟುಬಿಟ್ಟಿದ್ದರು.

ಸದ್ಯ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದೆ. ಈ ಹಿಂದೆ ಕರ್ನಾಟಕದಲ್ಲಿ ಅಧಿಕಾರಕ್ಕೇರಿದ ೨೪ ಗಂಟೆಗಳಲ್ಲಿ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಜೆಡಿಎಸ್ 6 ತಿಂಗಳೂ ಕಳೆದರೂ ಭರವಸೆ ಈಡೇರಿಕೆಗೆ ತಿಣುಕಾಡುತ್ತಿರುವಾಗ 10 ದಿನದಲ್ಲಿ ಸಾಲ ಮನ್ನಾ ಹೇಗೆ ಸಾಧ್ಯ ಎಂಬುದೇ ಯಕ್ಷಪ್ರಶ್ನೆ. ರಾಹುಲ್ ನೀಡಿದ ಭರವಸೆಯನ್ನು ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಈಡೇರಿಸದಿದ್ದಲ್ಲಿ ವಿಪಕ್ಷಗಳಿಗೆ ಅದು ಲಾಭವಾಗಿ ಪರಿಣಮಿಸುತ್ತದೆ. ಹೀಗಾಗಿ ಸಾಲ ಮನ್ನಾ ಮಾಡಲೇಬೇಕಾದ ಅನಿವಾರ್ಯತೆ 3 ರಾಜ್ಯಗಳಲ್ಲಿದೆ.

ರೈತರ ಸಮಸ್ಯೆಗೆ ಸಾಲ ಮನ್ನಾ ಪರಿಹಾರವೇ?

ಇದುವರೆಗೆ ಹಲವು ರಾಜ್ಯಗಳು ತಾವು ನೀಡಿದ ಭರವಸೆಯಂತೆ ರೈತರ ಸಾಲ ಮನ್ನಾ ಮಾಡಿವೆ. ಆದರೆ ಅಲ್ಲಿಗೆ ರೈತರ ಸಮಸ್ಯೆಗಳೆಲ್ಲಾ ಪರಿಹಾರವಾಗಿದೆಯೇ? ಇಲ್ಲ. ಸಾಲ ಮನ್ನಾವಾದ ಬಳಿಕ ಮತ್ತೆ ಸಾಲ ಮಾಡುತ್ತಾರೆ. ಇದೇ ಮುಂದುವರೆಯುತ್ತದೆ ಬಿಟ್ಟರೆ ಬೇರೇನೂ ಉಪಯೋಗ ಇಲ್ಲ. ಆದರೆ ಮತ್ತೊಂದೆಡೆ ಕಾರ್ಪೊರೇಟ್ ವಲಯದಲ್ಲಿಯೇ ಸಾಲ ಮರುಪಾವತಿ ಸಂಸ್ಕೃತಿ ಮರೆಯಾಗಿದೆ.

ಹೀಗಿದ್ದಾಗ ರೈತರ ಸಾಲವನ್ನೇಕೆ ಮನ್ನಾ ಮಾಡಬಾರದು ಎಂಬ ವಾದವೂ ಇದೆ. ವಾಸ್ತವವಾಗಿ ಭಾರತದಂತಹ ಕೃಷಿ ಪ್ರಧಾನ ರಾಷ್ಟ್ರಗಳಲ್ಲಿ ಕೃಷಿ ಕ್ಷೇತ್ರದ ಸಬಲೀಕರಣವಾಗುವಂತಹ ಶಾಶ್ವತ ಪರಿಹಾರ ಬೇಕು. ಅಂತಾರಾಷ್ಟ್ರೀಯ
ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ತಂದು ಕೊಡುವ ಬೆಳೆಗಳಿಗೆ ಆದ್ಯತೆ ನೀಡಬೇಕು. ಸರ್ಕಾರ ಮಾರುಕಟ್ಟೆ ಕಾಯ್ದೆ/ ಮೂಲ ಸೌಕರ್ಯಗಳತ್ತ ಗಮನ ನೀಡಬೇಕಿದೆ.

ಸಾಲಮನ್ನಾ ಮೊದಲು ಮಾಡಿದ್ದು  ವಿ ಪಿ ಸಿಂಗ್

ಕೃಷಿ ಕ್ಷೇತ್ರ ಸದ್ಯ ಬಿಕ್ಕಟ್ಟಿನಲ್ಲಿದೆ. ಹೀಗಾಗಿ ರೈತರಪರ ಯೋಜನೆಗಳ ಅನುಷ್ಠಾನಕ್ಕೆ ಆಗಾಗ ಅಹವಾಲುಗಳು ಕೇಳಿಬರುತ್ತಿವೆ. ಅವುಗಳಲ್ಲಿ ಮೊದಲನೆಯದೇ ಸಾಲ ಮನ್ನಾ. ಚುನಾವಣೆಗಳ ಸಮಯದಲ್ಲಿ ಸಾಲ ಮನ್ನಾವೇ ರಾಜಕೀಯ
ಪಕ್ಷಗಳ ಪ್ರಮುಖ ಅಜೆಂಡಾ ಎನ್ನುವಂತಾಗಿದೆ.

ಮೊಟ್ಟ ಮೊದಲ ಬಾರಿಗೆ ರಾಷ್ಟ್ರಾದ್ಯಂತ ಸಾಲಮನ್ನಾ ಆಗಿದ್ದು 1990 ರ ವಿ.ಪಿ. ಸಿಂಗ್ ನೇತೃತ್ವದ ಸರ್ಕಾರದಲ್ಲಿ. ಆಗ ₹10.000 ಕೋಟಿ ಸಾಲಮನ್ನಾ ಮಾಡಲಾಗಿತ್ತು. ಅನಂತರದಲ್ಲಿ 2008 ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ
ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ 32 ಸಾವಿರ ಕೋಟಿ ರುಪಾಯಿ ರೈತರ ಸಾಲ ಮನ್ನಾ ಮಾಡಿತ್ತು. ಇದು 2009 ರಲ್ಲಿ ಯುಪಿಎ ಎರಡನೇ ಅವಧಿಗೆ ಅಧಿಕಾರಕ್ಕೆ ಬರಲು ಸಹಕಾರವಾಗಿತ್ತು.

2014 ರಲ್ಲಿ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು, 2016 ರಲ್ಲಿ ತಮಿಳುನಾಡು ಸಾಲಮನ್ನಾ ಮಾಡಿದ್ದವು. ಇತ್ತೀಚೆಗೆ ಮಹಾರಾಷ್ಟ್ರ, ಉತ್ತರಪ್ರದೇಶ, ಪಂಜಾಬ್ ಮತ್ತು ಕರ್ನಾಟಕದಲ್ಲಿಯೂ ಸಾಲ ಮನ್ನಾ ಮಾಡಲಾಗಿದೆ. 2014 ರಿಂದ ಇಲ್ಲಿಯವರೆಗೆ ಒಟ್ಟು 1,82,802 ಕೋಟಿ ರು. ಸಾಲಮನ್ನಾ ಮಾಡಲಾಗಿದೆ. ಇದು 2019 ರ ವೇಳೆ 4 ಲಕ್ಷ ಕೋಟಿ ತಲುಪಲಿದೆ ಎಂದು ಹೇಳಲಾಗುತ್ತಿದೆ. 

ಸಾಲಮನ್ನಾ ಎಷ್ಟು ಕಷ್ಟ? 

ರೈತರು ನಮ್ಮ ದೇಶದ ವೋಟ್‌ಬ್ಯಾಂಕ್ ಆದ ಕಾರಣ ಸಾಲ ಮನ್ನಾ ತಂತ್ರ ರಾಜಕೀಯ ಪಕ್ಷಗಳ ಅಜೆಂಡಾ ಆಗಿ ಹಲವು ವರ್ಷಗಳೇ ಕಳೆದಿವೆ. ರಾಜಕೀಯ ಪಕ್ಷಗಳು ಮತದಾರನ ಮನವೊಲಿಕೆಗೆ ಸಾಲ ಮನ್ನಾ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿಬಿಡುತ್ತವೆ. ಆದರೆ ಅದು ಅಷ್ಟು ಸುಲಭದ ಕೆಲಸವಲ್ಲ. ಉದಾಹರಣೆಗೆ ಕರ್ನಾಟದಲ್ಲಿ ಅಧಿಕಾರಕ್ಕೇರಿರುವ ಜೆಡಿಎಸ್, ಸರ್ಕಾರ ರಚನೆಯಾದ ೨೪ ಗಂಟೆಯೊಳಗಾಗಿ ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿತ್ತು. ಆದರೆ 6 ತಿಂಗಳಾದರೂ ಇನ್ನೂ ತಿಣುಕಾಡುತ್ತಿದೆ.

ಯಾವ ರೈತರ ಸಾಲ ಮನ್ನಾವಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇತ್ತ ಬ್ಯಾಂಕುಗಳು ರೈತರ ಮನೆಬಾಗಿಲಿಗೆ ಹೋಗುತ್ತಿವೆ. ಇದರಾಚೆಗೆ ಸರ್ಕಾರಗಳು ಹೀಗೇ ಸಾಲ ಮನ್ನಾ ಮಾಡುತ್ತಾ ಹೋದರೆ ಸಾಲ ಮರು ಪಾವತಿ ಸಂಸ್ಕೃತಿಯೇ ಮರೆಯಾಗುತ್ತದೆ. ಪ್ರತೀ ಬಾರಿ ನೂತನ ಸರ್ಕಾರ ರಚನೆಯಾಗಿ ಸಾಲ ಮನ್ನಾ ಮಾಡಲಿ ಎಂಬ ಮನೋಭಾವ ಬೆಳೆಯುತ್ತದೆ. ಮತ್ತು ರಾಜ್ಯದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಮೊದಲೇ ಸುಸ್ತಿಸಾಲದ ಸಂಕಷ್ಟದಲ್ಲಿರುವ ಬ್ಯಾಂಕುಗಳ ಮೇಲೆ ಮತ್ತಷ್ಟು ಹೊರೆ ಬೀಳುತ್ತದೆ.

Follow Us:
Download App:
  • android
  • ios