ಕರ್ನಾಟಕದಲ್ಲಿ ವೈದ್ಯಕೀಯ ಕೋರ್ಸ್‌ ಪೂರ್ಣಗೊಳಿಸಿದ ಅಭ್ಯರ್ಥಿಯು ರಾಜ್ಯದಲ್ಲೇ ವೈದ್ಯಕೀಯ ವೃತ್ತಿ ನಡೆಸಲು ಬಯಸಿದರೆ ಆಗ ಆತ ಕಡ್ಡಾಯವಾಗಿ 1 ವರ್ಷದ ಗ್ರಾಮೀಣ ಸೇವೆ ಕೈಗೊಳ್ಳಬೇಕು. ಇಲ್ಲದಿದ್ದರೆ, ಆತ ರಾಜ್ಯದಲ್ಲಿ ವೈದ್ಯ ವೃತ್ತಿ ಕೈಗೊಳ್ಳುವಂತಿಲ್ಲ.

ಬೆಂಗಳೂರು: ಕರ್ನಾಟಕದಲ್ಲಿ ವೈದ್ಯಕೀಯ ಕೋರ್ಸ್‌ ಪೂರ್ಣಗೊಳಿಸಿದ ಅಭ್ಯರ್ಥಿಯು ರಾಜ್ಯದಲ್ಲೇ ವೈದ್ಯಕೀಯ ವೃತ್ತಿ ನಡೆಸಲು ಬಯಸಿದರೆ ಆಗ ಆತ ಕಡ್ಡಾಯವಾಗಿ 1 ವರ್ಷದ ಗ್ರಾಮೀಣ ಸೇವೆ ಕೈಗೊಳ್ಳಬೇಕು. ಇಲ್ಲದಿದ್ದರೆ, ಆತ ರಾಜ್ಯದಲ್ಲಿ ವೈದ್ಯ ವೃತ್ತಿ ಕೈಗೊಳ್ಳುವಂತಿಲ್ಲ.

ಅಂದರೆ, ರಾಜ್ಯದಲ್ಲಿ ವೈದ್ಯಕೀಯ ಕೋರ್ಸ್‌ ವ್ಯಾಸಂಗ ಮಾಡಿ, ವೃತ್ತಿಯನ್ನು ಹೊರರಾಜ್ಯ ಅಥವಾ ಹೊರರಾಷ್ಟ್ರದಲ್ಲಿ ಕೈಗೊಳ್ಳಬಯಸು ವವರಿಗೆ ಈ ಗ್ರಾಮೀಣ ಸೇವೆ ಕಡ್ಡಾಯ ನೀತಿ ಅನ್ವಯಿಸುವುದಿಲ್ಲ. ಹೀಗೊಂದು ಕಾಯ್ದೆ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ.

ಈ ಸಂಬಂಧ 2017ರ ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ ಕಾಯ್ದೆಗೆ ತಿದ್ದುಪಡಿ ತರಲು ಬುಧವಾರ ವಿಧಾನಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ವಿಧೇಯಕ ಮಂಡಿಸಿದರು. ಈ ಮಸೂದೆ ಅಂಗೀಕಾರವಾದರೆ, ವೈದ್ಯಕೀಯ ಪದವಿ ಕೋರ್ಸ್‌ ಎಂಬಿಬಿಎಸ್‌, ವೈದ್ಯಕೀಯ ಡಿಪ್ಲೋಮಾ ಮತ್ತು ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಾದ ಎಂಎಸ್‌, ಎಂಡಿ ಮತ್ತಿತರ ಕೋರ್ಸ್‌ಗಳನ್ನು ಪೂರ್ಣಗೊಳಿಸಿದವರಿಗೆ ಒಂದು ವರ್ಷದ ಗ್ರಾಮೀಣ ಸೇವೆ ಕಡ್ಡಾಯವಾಗಲಿದೆ. ಎನ್‌ಆರ್‌ಐ ಸೇರಿದಂತೆ ಮತ್ತಿತರ ಖಾಸಗಿ ಆಡಳಿತ ಮಂಡಳಿಗಳ ಕೋಟಾದಡಿ ಕೋರ್ಸ್‌ ಮುಗಿಸಿದ ಅಭ್ಯರ್ಥಿಗಳು ಒಂದು ವೇಳೆ ರಾಜ್ಯದಲ್ಲಿ ವೈದ್ಯಕೀಯ ವೃತ್ತಿಗೆ ನೋಂದಣಿ ಮಾಡಿಕೊಳ್ಳುವುದಿಲ್ಲವಾದರೆ ಅವರಿಗೆ ಒಂದು ವರ್ಷದ ಗ್ರಾಮೀಣ ಕಡ್ಡಾಯ ಸೇವೆ ಅನ್ವಯ ಆಗುವುದಿಲ್ಲ.

ಇದು ತರಬೇತಿಯಲ್ಲ, ಸೇವೆ: ರಾಜ್ಯದಲ್ಲಿ ವೈದ್ಯಕೀಯ ಕೋರ್ಸ್‌ ಮುಗಿಸಿದವರಿಗೆ ಗ್ರಾಮೀಣ ಸೇವೆಯನ್ನು ಇದುವರೆಗೂ ತರಬೇತಿ ಅವಧಿ ಎಂದು ಪರಿಗಣಿಸಲಾಗುತ್ತಿತ್ತು. ಈ ಪರಿಕಲ್ಪನೆಯನ್ನು ಕೈಬಿಟ್ಟು ಸೇವೆ ಎಂಬ ಪದವನ್ನು ತಿದ್ದುಪಡಿ ಮಸೂದೆಯಲ್ಲಿ ಸೇರಿಸಲಾಗಿದೆ. ಇದರಿಂದ ಒಂದು ವರ್ಷದ ಗ್ರಾಮೀಣ ಸೇವೆ ಅವಧಿಯಲ್ಲಿ ವೈದ್ಯರು ಸ್ವತಂತ್ರವಾಗಿ ಚಿಕಿತ್ಸೆ ನೀಡಲು ಮತ್ತು ಔಷಧ ಸೂಚಿಸಲು ಅಧಿಕಾರ ಸಿಗಲಿದೆ. ಒಂದು ವರ್ಷದ ಗ್ರಾಮೀಣ ಸೇವೆಗೆ ತೆರಳುವ ಅಭ್ಯರ್ಥಿಗಳಿಗೆ ಒಂದು ವರ್ಷದ ತಾತ್ಕಾಲಿಕ ನೋಂದಣಿಯನ್ನು ಸರ್ಕಾರ ನೀಡಲಿದೆ. ಅದಾದ ಬಳಿಕ ಸ್ವತಂತ್ರ ವೃತ್ತಿ ಕೈಗೊಳ್ಳಲು ವೈದ್ಯರು ಪ್ರತ್ಯೇಕ ನೋಂದಣಿ ಮಾಡಿಸಿಕೊಳ್ಳಲಿದ್ದಾರೆ.

ಇನ್ನು ವೈದ್ಯಕೀಯ ಪದವಿ ಅವಧಿ, ಅಂದರೆ ಎಂಬಿಬಿಎಸ್‌ ಮುಗಿದ ಬಳಿಕ ಸ್ನಾತಕೋತ್ತರ ಸೀಟು ಸಿಕ್ಕರೆ, ಅಂತಹ ಅಭ್ಯರ್ಥಿ ಸ್ನಾತಕೋತ್ತರ ಕೋರ್ಸ್‌ ಮುಗಿದ ನಂತರವೇ ಒಂದು ವರ್ಷದ ಕಡ್ಡಾಯ ಗ್ರಾಮೀಣ ಸೇವೆ ಮಾಡಬೇಕಾಗುತ್ತದೆ. ಇದೇ ವೇಳೆ, ರಾಜ್ಯದಲ್ಲಿ ಕೋರ್ಸ್‌ ಮುಗಿಸಿದ ಅಭ್ಯರ್ಥಿಗಳು ಒಂದು ವರ್ಷ ಗ್ರಾಮೀಣ ಸೇವೆ ಮಾಡದಿದ್ದರೂ ಅವರಿಗೆ ಪದವಿ ಪ್ರದಾನ ಮಾಡಲು ತಿದ್ದುಪಡಿ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ಆಗ ಅಂತಹ ವೈದ್ಯರು ಬೇರೆಡೆಗೆ ವಲಸೆ ಹೋಗುವುದು ಅನಿವಾರ್ಯ. ಇದರಿಂದ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ವೈದ್ಯರ ಗ್ರಾಮೀಣ ಸೇವೆ ಕಡ್ಡಾಯ ಗೊಂದಲಕ್ಕೆ ಹೈಕೋರ್ಟ್‌ ಆದೇಶದ ಅನುಸಾರ ತೆರೆ ಬಿದ್ದಂತಾಗುತ್ತದೆ.