ವಾರಣಾಸಿ(ಸೆ.16): ಜಾರ್ಖಂಡ್'​ನ ವಾರಣಾಸಿಯಲ್ಲಿ ವೈದ್ಯಕೀಯ ಲೋಕವನ್ನೇ ಚಕಿತಗೊಳಿಸಿದ ಅಚ್ಚರಿಯೊಂದು ನಡೆದಿದ್ದು, 6 ವರ್ಷದ ಪುಟ್ಟ ಕಂದಮ್ಮನ ಹೊಟ್ಟೆಯಲ್ಲಿ ಸತ್ತ ಭ್ರೂಣವೊಂದು ಪತ್ತೆಯಾಗಿದೆ. ಆ ಪುಟ್ಟ ಕಂದನ ಹೊಟ್ಟೆಯಲ್ಲಿ ಭ್ರೂಣ ಬಂದಿದ್ದು ಹೇಗೆ ಇಲ್ಲಿದೆ ವಿವರ.

ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವಾರಣಾಸಿ ಗಡ್'ವಾ ಜಿಲ್ಲೆಯ 6 ವರ್ಷದ ಬಾಲಕನನ್ನು ಇಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ಹೊಟ್ಟೆಯಲ್ಲಿ ಗಂಟಿನಂತ ಬೆಳವಣಿಗೆಯಾಗಿದೆ ಎಂದು ಆತನ ಮನೆಯವರಿಗೆ ಆಪರೇಷನ್ ಮಾಡಬೇಕೆಂದಿದ್ದರು. ಆದರೆ ಆಪರೇಷನ್ ವೇಳೆ ವೈದ್ಯರೇ ಬೆಚ್ಚಿ ಬಿದ್ದಿದ್ದು, ಬಾಲಕನ ಹೊಟ್ಟೆಯಲ್ಲಿ ಸತ್ತ ಭ್ರೂಣ ಪತ್ತೆಯಾಗಿದೆ. ಆದರೆ ಇಂತಹ ಪ್ರಕರಣ ಈ ಮೊದಲೂ ಬೆಳಕಿಗೆ ಬಂದಿವೆ ಎಂದು ತಿಳಿಸಿದ ವೈದ್ಯರು ಪ್ರತಿ 5 ಲಕ್ಷದಲ್ಲಿ ಒಂದು ಮಗುವಿಗೆ ಹೀಗಾಗುತ್ತದೆ.

ಇದೊಂದು ಅಪರೂಪದ ಸಂಗತಿ ಎಂದು ವೈದ್ಯರು ತಿಳಿಸಿದ್ದರೂ ಮಗುವಿನ ಹೊಟ್ಟೆಯಲ್ಲಿ ಭ್ರೂಣವಿರಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಕಾಡುತ್ತದೆ. ಈ ಪ್ರಶ್ನೆಗೆ ಉತ್ತರ ನೀಡಿರುವ ವೈದ್ಯರು ಇಂತಹ ಮಕ್ಕಳು ತಾಯಿಯ ಹೊಟ್ಟೆಯಲ್ಲಿ ಅವಳಿ ಜವಳಿ ಇರುತ್ತವೆ. ಆದರೆ ಕೆಲ ಕಾರಣಗಳಿಂದ ಒಂದು ಮಗುವಿನ ಬೆಳವಣಿಗೆ ಆಗುವುದಿಲ್ಲ. ಹೀಗಾಗಿ ಸಶಕ್ತವಾಗಿರುವ ಭ್ರೂಣ ವಿಕಾಸಗೊಳ್ಳದಿರುವ ಭ್ರೂಣದ ಮೇಲೆ ಹಿಡಿ ಸಾಧಿಸಿಕೊಳ್ಳುತ್ತದೆ ಹಾಗೂ ಅದರ ಹೊಟ್ಟೆಯಲ್ಲೇ ಬೆಳೆದುಕೊಳ್ಳುತ್ತದೆ. ರಿತೇಶ್'ನೊಂದಿಗೆ ಹೀಗೇ ಆಗಿದೆ ಎಂದಿದ್ದಾರೆ.

ಇದೊಂದು ವೈದ್ಯಕೀಯ ಲೋಕವನ್ನು ಅಚ್ಚರಿಪಡಿಸಿದ ಅಪರೂಪದ ಘಟನೆಯಾಗಿದ್ದರೂ ಬಾಲಕನ ಪೋಷಕರು ಮಾತ್ರ ಈ ಶಾಕ್'ನಿಂದ ಹೊರ ಬಂದಿಲ್ಲ.