ಪಣಜಿ[ಫೆ.25]: ಅನಾರೋಗ್ಯ ಉಲ್ಬಣಿಸಿದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಇಲ್ಲಿನ ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ, ಗೋವಾ ಸಿಎಂ ಮನೋಹರ್‌ ಪರ್ರಿಕರ್‌ ಅವರ ಆರೋಗ್ಯವನ್ನು, ದೆಹಲಿಯ ಏಮ್ಸ್‌ನ ವೈದ್ಯರ ತಂಡ ಭಾನುವಾರ ಪರಿಶೀಲಿಸಿದೆ.

ಪರ್ರಿಕರ್‌ ತಪಾಸಣೆಗೆಂದೇ ಏಮ್ಸ್‌ನ ತಜ್ಞ ವೈದ್ಯರ ತಂಡ ಪಣಜಿಗೆ ಆಗಮಿಸಿದೆ. ತಜ್ಞರ ವೈದ್ಯರ ತಂಡ ಸೂಕ್ತ ಪರಿಶೀಲನೆ ಬಳಿಕ, ಮತ್ತೆ ಪರ್ರಿಕರ್‌ ಅವರನ್ನು ದೆಹಲಿಗೆ ಕರೆದೊಯ್ಯಬೇಕೇ ಅಥವಾ ಗೋವಾದಲ್ಲೇ ಚಿಕಿತ್ಸೆ ನೀಡಿದರೆ ಸಾಕೇ ಎಂಬುದನ್ನು ನಿರ್ಧರಿಸಲಿದೆ.

ಕಳೆದೊಂದು ವರ್ಷದಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಪರ್ರಿಕರ್‌ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಅವರನ್ನು ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.