ಭುವನೇಶ್ವರ[ಫೆ.11]: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ಒಡಿಶಾದ ಮಹಿಳೆಯೊಬ್ಬಳು ತನ್ನ ಎಡಗಾಲಿಗೆ ಗಾಯವಾಗಿದೆ ಎಂದು ಆಸ್ಪತ್ರೆಗೆ ತೆರಳಿದರೆ ವೈದ್ಯರು ಬಲಗಾಲಿಗೆ ಆಪರೇಷನ್‌ ಮಾಡಿ ಕಳುಹಿಸಿದ್ದಾರೆ!

ಕೆಯೊಂಜರ್‌ ಜಿಲ್ಲೆಯ ಖಾಬಿಲ್‌ ಎಂಬ ಗ್ರಾಮದಲ್ಲಿ ಮಿಟಾರಾಣಿ ಜೆನಾ ಎಂಬಾಕೆ ಎಡಗಾಲಿಗೆ ಆದ ಗಾಯಕ್ಕೆ ಚಿಕಿತ್ಸೆ ಪಡೆಯಲು ಆನಂದಪುರ ಉಪ ವಿಭಾಗದ ಆಸ್ಪತ್ರೆಗೆ ತೆರಳಿದ್ದಳು. ಮಹಿಳೆಯನ್ನು ತಪಾಸಣೆ ನಡೆಸಿದ ವೈದ್ಯರು ಗಾಯಕ್ಕೆ ಚಿಕಿತ್ಸೆ ನೀಡುವಂತೆ ಸಿಬ್ಬಂದಿಗೆ ತಿಳಿಸಿದ್ದರು. ಆದರೆ, ಆಸ್ಪತ್ರೆಯ ಸಿಬ್ಬಂದಿ ಅರವಳಿಕೆ ಮದ್ದು ನೀಡಿ ಇನ್ನೊಂದು ಕಾಲಿಗೆ ಆಪರೇಷನ್‌ ಮಾಡಿದ್ದಾರೆ.

ಪ್ರಜ್ಞೆ ಬಂದ ಬಳಿಕ ಇದನ್ನು ಕಂಡ ಮಹಿಳೆ ಆಘಾತಕ್ಕೆ ಒಳಗಾಗಿದ್ದು, ಅಧಿಕಾರಿಗಳಿಗೆ ದೂರು ನೀಡಿದ್ದಾಳೆ. ಕಾಲಿಗೆ ಗಾಯವಾಗಿದ್ದರೂ ಸ್ವಲ್ಪ ಮಟ್ಟಿಗೆ ನಡೆದಾಡುತ್ತಿದ್ದ ಆಕೆಗೆ ಇದೀಗ ಸರಿಯಾಗಿ ನಡೆದಾಡಲು ಆಗುತ್ತಿಲ್ಲ.