Asianet Suvarna News Asianet Suvarna News

' ಕುಮಾರಸ್ವಾಮಿ ಕೈಯಿಂದ ನಿಮ್ಮ ಕೆಲಸ ಮಾಡಿಸಿಕೊಡುವ ಹೊಣೆ ನನ್ನದು'

ಬಿಎಸ್‌ವೈ ನಂಬಿ ಹೋದರೆ ಭವಿಷ್ಯ ಹಾಳು: ಸಿದ್ದು| ಬಿಜೆಪಿಯವರು ಚುನಾವಣೆಗೆ ಹೋಗ್ತಾರೆ, ನೀವು ರೆಡಿನಾ?| ಬಿಜೆಪಿಯಲ್ಲಿ ಸಂತೋಷ್‌ ಕೆಳಗೆ ಕೆಲಸ ಮಾಡಬೇಕಾಗುತ್ತೆ| ಕುಮಾರಸ್ವಾಮಿ ಕೈಯಿಂದ ನಿಮ್ಮ ಕೆಲಸ ಮಾಡಿಸಿಕೊಡುವ ಹೊಣೆ ನನ್ನದು, ಶಾಸಕಾಂಗ ಪಕ್ಷದ ಸಭೆಯಲ್ಲಿ ಭರವಸೆ

Do not Join hands With BJP A Caution From Siddaramaiah To congress MLAs
Author
Bangalore, First Published May 30, 2019, 10:57 AM IST

ಬೆಂಗಳೂರು[ಮೇ.30]: ‘ಕಾಂಗ್ರೆಸ್‌ನ ಯಾವೊಬ್ಬ ಶಾಸಕರೂ ಆಮಿಷಕ್ಕೆ ಬಲಿಯಾಗಿ ಬಿಜೆಪಿಗೆ ಹೋಗಬಾರದು. ಬಿಜೆಪಿಯವರು ನಿಮ್ಮನ್ನೆಲ್ಲಾ ನಡುನೀರಿನಲ್ಲಿ ಬಿಟ್ಟು ಮಧ್ಯಂತರ ಚುನಾವಣೆಗೆ ಹೋಗಲಿದ್ದಾರೆ. ಹೀಗಾಗಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ನೆಚ್ಚಿಕೊಂಡು ಹೋದರೆ ಭವಿಷ್ಯ ಹಾಳು ಮಾಡಿಕೊಳ್ಳುತ್ತೀರಿ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, ಸಮ್ಮಿಶ್ರ ಸರ್ಕಾರದಲ್ಲಿ ಕೆಲಸಗಳಾಗುತ್ತಿಲ್ಲ ಎನ್ನುತ್ತಿರುವ ಕಾಂಗ್ರೆಸ್‌ ಶಾಸಕರ ಕೆಲಸಗಳನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಂದ ಮಾಡಿಸಿಕೊಡುವ ಜವಾಬ್ದಾರಿಯನ್ನು ಖುದ್ದು ನಾನೇ ತೆಗೆದುಕೊಳ್ಳುತ್ತೇನೆ. ಕ್ಷೇತ್ರದ ಕೆಲಸಗಳಿಗೆ ಆದ್ಯತೆ ನೀಡುತ್ತೇವೆ. ಜತೆಗೆ ಸ್ವಲ್ಪ ದಿನಗಳ ಬಳಿಕ ಸೂಕ್ತ ಸ್ಥಾನಮಾನಗಳನ್ನೂ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬುಧವಾರ ಸಂಜೆ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್‌ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ವೇಳೆ ನೀವು ಆಮಿಷಗಳಿಗೆ ಬಲಿಯಾಗಿ ಬಿಜೆಪಿಗೆ ಹೋದರೂ ನಿಮಗೆ ಸಚಿವ ಸ್ಥಾನ ನೀಡುವುದಿಲ್ಲ. ಬದಲಿಗೆ ಲೋಕಸಭಾ ಚುನಾವಣೆಯ ಫಲಿತಾಂಶದಿಂದ ಪ್ರಭಾವಿತರಾಗಿರುವ ಅವರು ಚುನಾವಣೆಗೆ ಹೋಗುತ್ತಾರೆ. ಮತ್ತೆ ಚುನಾವಣೆಗೆ ಹೋಗಲು ನೀವೆಲ್ಲಾ ಸಿದ್ಧರಿದ್ದೀರಾ? ಹೀಗಾಗಿ ಅನಗತ್ಯ ಭವಿಷ್ಯ ಹಾಳು ಮಾಡಿಕೊಳ್ಳದೆ ಸಮ್ಮಿಶ್ರ ಸರ್ಕಾರದ ಭಾಗವಾಗಿ ಪಕ್ಷದಲ್ಲೇ ಇರಿ ಎಂದು ಸಲಹೆ ನೀಡಿದರು.

ಪ್ರತಿಯೊಬ್ಬ ಶಾಸಕರಿಂದಲೂ ಸಮಸ್ಯೆಗಳನ್ನು ಆಲಿಸಿದ ಅವರು, ಕೆಲವು ಅತೃಪ್ತರಿಗೆ ಸಚಿವ ಸ್ಥಾನ ಕಲ್ಪಿಸಿಕೊಡಲು ಪಕ್ಷದಲ್ಲಿ ಚರ್ಚೆಯಾಗುತ್ತಿದೆ. ಗುರುವಾರ 11 ಗಂಟೆಗೆ ಪಕ್ಷದ ಹಿರಿಯ ನಾಯಕರ ಸಭೆ ನಡೆಸಲಾಗುವುದು. ಬಳಿಕ ಸದ್ಯದಲ್ಲೇ ಸಚಿವ ಸಂಪುಟ ಪುನರ್‌ರಚನೆ ನಡೆಸಲಾಗುವುದು. ಈ ವೇಳೆ ಅನ್ಯಾಯಕ್ಕೆ ಗುರಿಯಾಗಿರುವವರಿಗೆ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಯಾವ ಶಾಸಕರೂ ಬಿಜೆಪಿಗೆ ಹೋಗಬಾರದು. ಬಿ.ಎಸ್‌. ಯಡಿಯೂರಪ್ಪ ಅವರನ್ನು ನೆಚ್ಚಿಕೊಂಡು ಬಿಜೆಪಿಗೆ ಹೋದರೆ ಭವಿಷ್ಯವಿರುವುದಿಲ್ಲ. ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದವರಿಗೆ ಮಾತ್ರ ಅಲ್ಲಿ ಅಧಿಕಾರ ಕೊಡುವ ದಿನಗಳು ಬರುತ್ತಿವೆ. ನೀವು ಪಕ್ಷ ಬಿಟ್ಟು ಹೋದರೆ ಮುಂದೆ ಬಿ.ಎಲ್‌. ಸಂತೋಷ್‌ ಕೆಳಗಡೆ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ನೀವು ನಂಬಿರುವ ಪಕ್ಷದ ಸಿದ್ಧಾಂತ ಹಾಗೂ ನಿಮ್ಮ ಕ್ಷೇತ್ರದ ಜನಾದೇಶಕ್ಕೆ ಬೆಲೆ ನೀಡಬೇಕು. ಕ್ಷೇತ್ರ ಹಾಗೂ ಸರ್ಕಾರದ ಮಟ್ಟದಲ್ಲಿ ನಿಮ್ಮ ಸಮಸ್ಯೆಗಳು ಏನೇ ಇದ್ದರೂ ಸಮ್ಮಿಶ್ರ ಸರ್ಕಾರ ಬಗೆಹರಿಸಲು ಬದ್ಧವಾಗಿದೆ. ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಪಕ್ಷದ ಎಲ್ಲಾ ಶಾಸಕರಿಗೂ ಅಧಿಕಾರಗಳು ದೊರೆಯದಿರಬಹುದು. ಆದರೆ, ಪಕ್ಷದ ಸ್ಥಿತಿ ಅರ್ಥ ಮಾಡಿಕೊಂಡು ಸರ್ಕಾರಕ್ಕಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

* ರಾಹುಲ್‌ಗಾಂಧಿ ಪರ ಸಿಎಲ್‌ಪಿ ನಿರ್ಣಯ

ಲೋಕಸಭೆ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನ ತೊರೆಯಲು ಮುಂದಾಗಿರುವ ರಾಹುಲ್‌ ಗಾಂಧಿ ಅವರು ತಮ್ಮ ನಿರ್ಧಾರವನ್ನು ಬದಲಿಸಿಕೊಳ್ಳಬೇಕು. ಅವರೇ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಸರ್ವಾನುಮತದಿಂದ ನಿರ್ಣಯ ಕೈಗೊಂಡಿದೆ.

ಬುಧವಾರ ಸಂಜೆ ಸಭೆ ಆರಂಭವಾಗುತ್ತಿದ್ದಂತೆ ಲೋಕಸಭೆ ಚುನಾವಣೆ ಸೋಲಿಗೆ ಹಲವು ಕಾರಣಗಳಿವೆ. ಪಕ್ಷದ ಅಧ್ಯಕ್ಷರಾಗಿರುವ ರಾಹುಲ್‌ ಗಾಂಧಿ ಅವರು ದೇಶಾದ್ಯಂತ ಸಂಚಾರ ಮಾಡಿ ಪಕ್ಷ ಸಂಘಟನೆ ಮಾಡಿದರು. ಆದರೆ ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡು ಬಿಜೆಪಿ ಗೆಲುವು ಸಾಧಿಸಿದೆ. ಪಕ್ಷದ ಭವಿಷ್ಯದ ದೃಷ್ಟಿಯಿಂದ ಸಮರ್ಥ ನಾಯಕರಾದ ರಾಹುಲ್‌ ಗಾಂಧಿ ಅವರು ಅಧ್ಯಕ್ಷರಾಗಿಯೇ ಮುಂದುವರೆಯಬೇಕು. ಹೀಗಾಗಿ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿ ಎಂದು ಮನವಿ ಮಾಡಿದರು. ಸಿದ್ದರಾಮಯ್ಯ ಅವರು ಮಂಡಿಸಿದ ನಿರ್ಣಯವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅನುಮೋದಿಸಿದರು. ಸಭೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಶಾಸಕರೂ ಕೈ ಎತ್ತುವ ಮೂಲಕ ನಿರ್ಣಯಕ್ಕೆ ಸರ್ವಾನುಮತದ ಒಪ್ಪಿಗೆ ಸೂಚಿಸಿದರು.

Follow Us:
Download App:
  • android
  • ios