ಚೆನ್ನೈ[ಜು.02]: ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರನ್ನು ತಮಿಳುನಾಡಿನಿಂದ ರಾಜ್ಯಸಭೆಗೆ ಕಳುಹಿಸುವಂತೆ ಕಾಂಗ್ರೆಸ್‌ ಇಟ್ಟಿದ್ದ ಕೋರಿಕೆಯನ್ನು ಮಿತ್ರ ಪಕ್ಷ ಡಿಎಂಕೆ ತಿರಸ್ಕರಿಸಿದೆ. ಇದರಿಂದಾಗಿ ಮನಮೋಹನ್‌ ಅವರು ರಾಜಸ್ಥಾನದಿಂದ ಆಯ್ಕೆಯಾಗುವ ಸಂಭವವಿದೆ.

ತಮಿಳುನಾಡಿನಲ್ಲಿ ತೆರವಾಗಿರುವ 6 ರಾಜ್ಯಸಭೆ ಸ್ಥಾನಗಳಿಗೆ ಜು.18ರಂದು ಚುನಾವಣೆ ನಡೆಯಲಿದೆ. ಈ ಪೈಕಿ 3 ಸ್ಥಾನ ಗೆಲ್ಲಲು ಡಿಎಂಕೆಗೆ ಸಾಧ್ಯವಿದೆ. ಲೋಕಸಭೆ ಚುನಾವಣಾಪೂರ್ವದಲ್ಲಿ ಮಾಡಿಕೊಂಡಿದ್ದ ಮೈತ್ರಿಯಂತೆ ಒಂದು ಸ್ಥಾನವನ್ನು ವೈಕೋ ನೇತೃತ್ವದ ಎಂಡಿಎಂಕೆಗೆ ಬಿಟ್ಟುಕೊಟ್ಟಿರುವ ಡಿಎಂಕೆ, ಉಳಿದ ಎರಡು ಸ್ಥಾನಗಳಿಗೆ ತನ್ನ ಮುಖಂಡರಿಗೆ ಟಿಕೆಟ್‌ ನೀಡಿದೆ. ಇದರಿಂದಾಗಿ ಮನಮೋಹನ ಸಿಂಗ್‌ ಆಯ್ಕೆಯಾಗದಂತಾಗಿದೆ.

ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯರಾಗಿದ್ದ ಲಾಲ್‌ ಸೈನಿ ಅವರು ಇತ್ತೀಚೆಗೆ ನಿಧನರಾಗಿದ್ದಾರೆ. ಅವರಿಂದ ತೆರವಾಗಿರುವ ರಾಜ್ಯಸಭೆ ಸ್ಥಾನಕ್ಕೆ ಕಾಂಗ್ರೆಸ್‌ ಪಕ್ಷ ಮನಮೋಹನ ಸಿಂಗ್‌ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ರಾಜಸ್ಥಾನದಲ್ಲಿ ಕಾಂಗ್ರೆಸ್‌ ಬಹುಮತ ಹೊಂದಿರುವುದರಿಂದ ಸಿಂಗ್‌ ಅವರ ಆಯ್ಕೆಗೆ ಸಮಸ್ಯೆ ಇಲ್ಲ ಎನ್ನಲಾಗಿದೆ.