* ಐಟಿ ದಾಳಿ ವೇಳೆ ಡಿಕೆಶಿ ಡೈರಿ ವಶಕ್ಕೆ* ಕಾಂಗ್ರೆಸ್ ಹೈಕಮಾಂಡ್ಗೆ 3 ಕೋಟಿ ಕಪ್ಪ* ಕಪ್ಪ ಕೊಟ್ಟಿರುವ ಬಗ್ಗೆ ಡೈರಿಯಲ್ಲಿ ಉಲ್ಲೇಖ* ಇದೇ ಡೈರಿಯನ್ನು ಐಟಿ ದಾಳಿ ವೇಳೆ ಹರಿದ ಡಿಕೆಶಿ* ಐಟಿ ಅಧಿಕಾರಿಗಳ ಎದುರೇ ಕಾಗದಗಳನ್ನು ಹರಿದು ಹಾಕಿದ ಡಿಕೆಶಿ* ಇನ್ನೂ ಕೆಲವು ನಾಯಕರಿಗೆ ಹಣ ನೀಡಿರುವ ಬಗ್ಗೆ ಡೈರಿಯಲ್ಲಿ ಉಲ್ಲೇಖ
ಬೆಂಗಳೂರು(ಆ. 03): ನಿನ್ನೆ ಆದಾಯ ತೆರಿಗೆ ಅಧಿಕಾರಿಗಳು ರೇಡ್ ಮಾಡಿದ ವೇಳೆ ಡಿಕೆ ಶಿವಕುಮಾರ್ ಕೆಲ ದಾಖಲೆಗಳನ್ನು ಹರಿದುಹಾಕಲು ಪ್ರಯತ್ನಿಸಿದರೆಂಬ ಸುದ್ದಿ ಕೇಳಿಬಂದಿತ್ತು. ಇದೀಗ, ಆ ದಾಖಲೆಯು ಬಹಳ ಮಹತ್ವದ ಅಂಶಗಳನ್ನು ಒಳಗೊಂಡಿರುವ ಡೈರಿ ಎಂಬ ಸತ್ಯ ಬಹಿರಂಗವಾಗಿದೆ. ಕಾಂಗ್ರೆಸ್ ಹೈಕಮಾಂಡ್'ಗೆ ಕಪ್ಪ ಕೊಟ್ಟಿರುವ ಮಾಹಿತಿ ಈ ಡೈರಿಯಲ್ಲಿತ್ತು ಎಂದು ರಾಷ್ಟ್ರೀಯ ವಾಹಿನಿ ಟೈಮ್ಸ್ ನೌನಲ್ಲಿ ವರದಿಯಾಗಿದೆ. ಈ ಡೈರಿಯಲ್ಲಿನ ಕೆಲ ಕಾಗದಗಳನ್ನು ಡಿಕೆಶಿ ಹರಿದುಹಾಕಿದರೆನ್ನಲಾಗಿದೆ. ಜನವರಿ 5ರಂದು ಎಐಸಿಸಿಗೆ 3 ಕೋಟಿ ರೂ ಹಣ ಸಂದಾಯವಾಗಿರುವ ಬಗ್ಗೆ ಈ ಡೈರಿಯಲ್ಲಿ ಬರೆಯಲಾಗಿದೆ. ಹೈಕಮಾಂಡ್'ಗಷ್ಟೇ ಅಲ್ಲ ಇನ್ನೂ ಕೆಲವು ನಾಯಕರಿಗೆ ಹಣ ನೀಡಿರುವ ಬಗ್ಗೆ ಡೈರಿಯಲ್ಲಿ ಉಲ್ಲೇಖವಾಗಿತ್ತೆನ್ನಲಾಗಿದೆ. ಈಗಲ್'ಟನ್ ರೆಸಾರ್ಟ್'ನಲ್ಲಿ ರೇಡ್ ಮಾಡಿದ ಐಟಿ ಅಧಿಕಾರಿಗಳ ಎದುರೇ ಡಿಕೆಶಿ ಈ ಹಾಳೆಗಳನ್ನು ಹರಿದುಹಾಕಿದ್ದರು. ಪಂಚನಾಮೆ ವೇಳೆ ಅಧಿಕಾರಿಗಳು ಈ ಹರಿದ ಕಾಗದಪತ್ರಗಳನ್ನೂ ವಶಕ್ಕೆ ತೆಗೆದುಕೊಂಡು ಹೋಗಿದ್ದರು. ಈಗಲ್ಟನ್ ರೆಸಾರ್ಟ್'ಗೆ ಐಟಿ ಅಧಿಕಾರಿಗಳು ದಾಳಿ ಮಾಡಬಹುದೆಂದು ಡಿಕೆಶಿ ನಿರೀಕ್ಷಿಸಿರಲಿಲ್ಲವೆನ್ನಲಾಗಿದೆ. ಅನಿರೀಕ್ಷಿತವಾಗಿ ನಡೆದ ಈ ದಾಳಿಯಿಂದ ಗಲಿಬಿಲಿಗೊಂಡ ಡಿಕೆಶಿ ಈ ಡೈರಿಯ ದಾಖಲೆಗಳನ್ನು ನಾಶ ಮಾಡಲು ಯತ್ನಿಸಿದ್ದರೆನ್ನಲಾಗಿದೆ.
ವಿತ್ತ ಸಚಿವ ಅರುಣ್ ಜೇಟ್ಲಿ ನಿನ್ನೆ ರಾಜ್ಯಸಭೆಯಲ್ಲಿ ಈ ಬಗ್ಗೆ ಸುಳಿವು ನೀಡಿದ್ದರು. ಐಟಿ ರೇಡ್ ವೇಳೆ ಡಿಕೆ ಶಿವಕುಮಾರ್ ಡೈರಿಯನ್ನು ಹರಿಯಲು ಯತ್ನಿಸಿದ್ದನ್ನು ಜೇಟ್ಲಿ ಉಲ್ಲೇಖಿಸಿದ್ದರು.
