ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ರಾಜಿನಾಮೆಯಿಂದ ತೆರವಾಗಿರುವ ಗೃಹ ಖಾತೆಗೆ ಹೊಸ ಸಾರಥಿ ಯಾರು ಎಂಬ ಬಗ್ಗೆ ಕುತೂಹಲಕರ ಲೆಕ್ಕಾಚಾರಗಳು ನಡೆದಿವೆ.

ಬೆಂಗಳೂರು (ಮೇ.01): ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ರಾಜಿನಾಮೆಯಿಂದ ತೆರವಾಗಿರುವ ಗೃಹ ಖಾತೆಗೆ ಹೊಸ ಸಾರಥಿ ಯಾರು ಎಂಬ ಬಗ್ಗೆ ಕುತೂಹಲಕರ ಲೆಕ್ಕಾಚಾರಗಳು ನಡೆದಿವೆ.
ಮೂಲಗಳ ಪ್ರಕಾರ ಸದ್ಯಕ್ಕೆ ಸಿಎಂ ಅವರೇ ಖಾತೆಯ ಹೊಣೆಯನ್ನು ನಿರ್ವಹಿಸಲಿದ್ದು, ವಿಧಾನಮಂಡಲ ಅಧಿವೇಶನದ ನಂತರ ಹುದ್ದೆ ಬೇರೆಯವರಿಗೆ ವರ್ಗಾಯಿಸಬೇಕೇ ಅಥವಾ ತಾವೇ ಇಟ್ಟುಕೊಳ್ಳಬೇಕೇ ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಸಿಎಂ ಆಪ್ತರ ಪ್ರಕಾರ ಒಂದು ವೇಳೆ ಈ ಖಾತೆಯನ್ನು ಬೇರೆಯವರಿಗೆ ನೀಡಬೇಕು ಎಂಬ ತೀರ್ಮಾನವನ್ನು ಸಿಎಂ ಕೈಗೊಂಡರೆ ಆಗ ಹುದ್ದೆಯನ್ನು ಈ ಹಿಂದೆ ನಿರ್ವಹಿಸಿದ್ದ ಕೆ.ಜೆ. ಜಾರ್ಜ್ ಅವರಿಗೆ ನೀಡುವ ಮನಸ್ಸು ಅವರಿಗಿದೆ. ಇಲ್ಲದಿದ್ದರೆ, ತಾವೇ ಖಾತೆಯ ಹೊಣೆಯನ್ನು ಹೆಚ್ಚುವರಿಯಾಗಿ ನಿರ್ವಹಿಸುವ ಉದ್ದೇಶ ಹೊಂದಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷ ಗಾದಿ ಪಡೆಯಲು ತೀವ್ರ ಲಾಬಿ ನಡೆಸಿದ ಡಿ.ಕೆ.ಶಿವಕುಮಾರ್ ಅವರು ತಮಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವನ್ನು ಹೈಕಮಾಂಡ್ ನೀಡಿದ್ದರೂ ಸಮಾಧಾನಗೊಂಡಿಲ್ಲ. ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆದ ಹಲವು ಚುನಾವಣೆಗಳಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸಿದ ತಮ್ಮ ಕೊಡುಗೆಯನ್ನು ಹೈಕಮಾಂಡ್ ಗುರುತಿಸುತ್ತಿಲ್ಲ ಎಂಬ ಬೇಸರ ಅವರಿಗಿದೆ. ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಗಾದಿ ಪೈಪೋಟಿ ವೇಳೆ ರಾಜ್ಯದ ಬಹುತೇಕ ಎಲ್ಲಾ ನಾಯಕರು ತಮ್ಮ ವಿರುದ್ಧ ನಿಂತಿದ್ದು ಬೇಸರ ತರಿಸಿದೆ. ಇದರಿಂದ ತಮ್ಮ ಇಮೇಜ್‌ಗೆ ಧಕ್ಕೆ ಉಂಟಾಗಿದೆ ಎಂಬ ಭಾವವೂ ಇದೆ. ಈ ಮಾಹಿತಿಯನ್ನು ಹೈಕಮಾಂಡ್‌ಗೆ ಮುಟ್ಟಿಸಿರುವ ಶಿವಕುಮಾರ್ ಆಪ್ತರು, ಅವರನ್ನು ಸಧಾನಾನಪಡಿಸಲು ಪರಮೇಶ್ವರ್ ಅವರಿಂದ ತೆರವಾಗುವ ಗೃಹ ಖಾತೆಯನ್ನು ಹೆಚ್ಚುವರಿಯಾಗಿ ನೀಡಬೇಕು ಎಂದು ಲಾಬಿ ಆರಂಭಿಸಿದ್ದಾರೆ ಎನ್ನಲಾಗಿದೆ.
ಈ ಲಾಬಿಯೇನಾದರೂ ಪ್ರಬಲವಾಗಿ ನಡೆದು, ಹೈಕಮಾಂಡ್ ಈ ವಾದಕ್ಕೆ ಮನ್ನಣೆ ನೀಡಿ ಗೃಹ ಖಾತೆಯನ್ನು ಡಿ.ಕೆ.ಶಿವಕುಮಾರ್‌ಗೆ ಕೊಡಿ ಎಂದು ನೇರ ಸೂಚನೆಯನ್ನು ಸಿದ್ದರಾಮಯ್ಯ ಅವರಿಗೆ ನೀಡಿದರೆ ಮಾತ್ರ ಅವರಿಗೆ ಗೃಹ ಖಾತೆ ದೊರೆಯುವ ಅವಕಾಶವಿದೆ. ಇಲ್ಲದಿದ್ದರೆ, ಈ ಹುದ್ದೆ ಜಾರ್ಜ್‌ಗೆ ಸಿಗಬಹುದು ಇಲ್ಲವೇ ಸಿಎಂ ಅವರೇ ನಿರ್ವಹಿಸಬಹುದು ಎಂದು ಮೂಲಗಳು ಹೇಳುತ್ತವೆ.
ಉಸ್ತುವಾರಿಗಳಿಗೆ ಇನ್ನೋವಾ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಲು ಆಗಮಿಸಿರುವ ಕೆ.ಸಿ.ವೇಣುಗೋಪಾಲ್ ಹಾಗೂ ಅವರ ತಂಡಕ್ಕೆ ಐದು ಇನ್ನೋವಾ ವಾಹನಗಳನ್ನು ಕೆಪಿಸಿಸಿ ಬುಕ್ ಮಾಡಿದೆ. ಚುನಾವಣೆ ಮುಗಿಯುವವರೆಗೂ ರಾಜ್ಯದಲ್ಲೇ ಸಾಧ್ಯವಾದಷ್ಟು ಹೆಚ್ಚು ಕಾಲ ನೆಲೆ ನಿಂತು ಪ್ರವಾಸ ನಡೆಸಲಿರುವ ಈ ಉಸ್ತುವಾರಿಗಳ ಸಂಚಾರಕ್ಕಾಗಿ ಐದು ಇನ್ನೋವಾ ಕ್ರೆಸ್ಟಾ ವಾಹನಗಳನ್ನು ಕೆಪಿಸಿಸಿ ಬುಕ್ ಮಾಡಿದೆ ಎಂದು ತಿಳಿದುಬಂದಿದೆ.
ಅಲ್ಲದೆ, ಈ ಉಸ್ತುವಾರಿಗಳಿಗೆ ಯಾವ ವಿಭಾಗಗಳ ಹೊಣೆ ವಹಿಸಲಾಗಿದೆಯೋ ಆ ವಿಭಾಗದಲ್ಲೇ ಮನೆಯೊಂದನ್ನು ಒದಗಿಸಿಕೊಡಲು ಸಿದ್ಧತೆ ನಡೆಸಲಾಗುತ್ತಿದೆ. ಇನ್ನು ಕೆ.ಸಿ. ವೇಣುಗೋಪಾಲ್ ಅವರಿಗೆ ಬೆಂಗಳೂರಿನ ಅತಿ ದುಬಾರಿ ಹಾಗೂ ಪ್ರತಿಷ್ಠಿತ ಬಡಾವಣೆ ಎನಿಸಿರುವ ಸದಾಶಿವನಗರದಲ್ಲಿ ಮನೆ ಹುಡುಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.