ಡಿಕೆಶಿಗೆ ಆರೋಗ್ಯದಲ್ಲಿ ಏರುಪೇರು: ದೆಹಲಿ ಆಸ್ಪತ್ರೆಗೆ ದಾಖಲು!

ಡಿಕೆಶಿಗೆ ರಕ್ತದೊತ್ತಡ, ಜ್ವರ: ದೆಹಲಿ ಆಸ್ಪತ್ರೆಗೆ ದಾಖಲು| ವಿಚಾರಣೆ ವೇಳೆ ಆರೋಗ್ಯದಲ್ಲಿ ಏರುಪೇರು

DK Shivakumar Suffering From Fever And Blood Pressure Admitted To Hospital

ನವದೆಹಲಿ[ಸೆ.15]: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಶನಿವಾರ ಮಧ್ಯಾಹ್ನ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ರಾಮ ಮನೋಹರ ಲೋಹಿಯಾ ಅಸ್ಪತ್ರೆಗೆ ದಾಖಲಾಗಿದ್ದಾರೆ.

ಡಿ.ಕೆ.ಶಿವಕುಮಾರ್‌ ಅವರು ರಕ್ತದೊತ್ತಡದ ಸಮಸ್ಯೆಯೊಂದಿಗೆ ಜ್ವರದಿಂದ ಬಳಲುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಅವರ ಕುಟುಂಬದ ವೈದ್ಯರಾಗಿರುವ ಡಾ.ರಂಗನಾಥ್‌ ಮಾಹಿತಿ ನೀಡಿದ್ದಾರೆ. ಕಳೆದ 10 ದಿನಗಳಿಂದ ಇ.ಡಿ. ಕಸ್ಟಡಿಯಲ್ಲಿರುವ ಡಿ.ಕೆ.ಶಿವಕುಮಾರ್‌ ಅವರನ್ನು 11ನೇ ದಿನವಾದ ಶನಿವಾರದಂದು ಬೆಳಗ್ಗೆ 9.30ಕ್ಕೆ ತುಘಲಕ್‌ ರೋಡ್‌ ಠಾಣೆಯಿಂದ ಇ.ಡಿ. ಪ್ರಧಾನ ಕಚೇರಿಗೆ ವಿಚಾರಣೆಗೆಂದು ಕರೆದೊಯ್ಯಲಾಗಿತ್ತು. ಆದರೆ ಮಧ್ಯಾಹ್ನ 1 ಗಂಟೆಗೆ ಡಿ.ಕೆ.ಶಿವಕುಮಾರ್‌ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಶುಕ್ರವಾರ ನ್ಯಾಯಾಲಯದಲ್ಲಿ ಆರೋಗ್ಯದ ಸಮಸ್ಯೆಯ ಕಾರಣ ನೀಡಿ ಡಿ.ಕೆ.ಶಿವಕುಮಾರ್‌ ಜಾಮೀನು ಯಾಚಿಸಿದ್ದರು. ಆದರೆ ನ್ಯಾಯಾಲಯ ಜಾಮೀನು ನೀಡಲು ಒಪ್ಪದಿದ್ದರೂ ಡಿ.ಕೆ.ಶಿವಕುಮಾರ್‌ ಆರೋಗ್ಯ ಬಗ್ಗೆ ಮುತುವರ್ಜಿ ವಹಿಸುವಂತೆ ಸೂಚಿಸಿ ಮತ್ತೆ ನಾಲ್ಕು ದಿನಗಳ ಕಾಲ ಅಂದರೆ ಸೆ.17ರವರೆಗೆ ಇ.ಡಿ. ಕಸ್ಟಡಿಗೆ ನೀಡಿತ್ತು.

Latest Videos
Follow Us:
Download App:
  • android
  • ios