ಬೆಳಗ್ಗೆ ಎದ್ದರೆ ಸಾಕು ಆಪರೇಷನ್‌ ಕುರಿತಾದ ಮಾತುಗಳೇ ಕೇಳಿಬರುತ್ತವೆ. ನಮ್ಮ ಶಾಸಕರುಗಳೇ ದೂರವಾಣಿ ಕರೆ ಮಾಡಿ ಅಣ್ಣಾ ಅಷ್ಟುಕೋಟಿ ಕೊಡುತ್ತಾರಂತೆ, ಇಷ್ಟುಕೋಟಿ ಕೊಡುತ್ತಾರಂತೆ ಎಂದು ಹೇಳುತ್ತಿದ್ದಾರೆ ಎಂದು ಡಿ.ಕೆಶಿವಕುಮಾರ್ ಹೇಳಿದ್ದಾರೆ. 

ಶಿವಮೊಗ್ಗ : ದೇವರ ಕೃಪೆಯಿಂದ ಎಚ್‌.ಡಿ. ಕುಮಾರಸ್ವಾಮಿ ರಾಜ್ಯದ ಸಿಎಂ ಆಗಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಅಲ್ಲಾಡಿಸಬೇಕು, ಕಿತ್ತು ಹಾಕಬೇಕೆಂದು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ ಸರ್ಕಾರ ಬೀಳಿಸುವುದು ಅಷ್ಟುಸುಲಭವಲ್ಲ. ಹಾಗೆ ಬೀಳಿಸುವುದಕ್ಕೆ ಈ ಸರ್ಕಾರ ಮರಕ್ಕೆ ಕಟ್ಟಿದ ಕುಡಿಕೆಯಲ್ಲ ಎಂದು ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ನಗರದ ಒಕ್ಕಲಿಗ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಒಕ್ಕಲುತನ ಉಳಿಯಲಿ ಸಮಾರಂಭದಲ್ಲಿ ಮಾತನಾಡಿದ ಅವರು, ಎಂತೆಂತಹ ಚಕ್ರವರ್ತಿಗಳೆಲ್ಲಾ ಅಧಿಕಾರದಿಂದ ಇಳಿದು ಹೋಗಿರುವುದನ್ನು ನೋಡಿದ್ದೇನೆ. ಇನ್ನು ಇಂಥವರೆಲ್ಲಾ ಯಾವ ಲೆಕ್ಕ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಹಸಿರು ಶಾಲು ಹೊದ್ದು ವಿಧಾನಸೌಧದ ಮುಂದೆ ನಿಂತುಕೊಂಡು ರೈತನ ಮಗ ನಾನು ಎಂದರೆ ಹೇಗೆ? ಅದರಿಂದ ರೈತರಿಗಾಗುವ ಪ್ರಯೋಜನವೇನು? ಅಧಿಕಾರ ಸಿಕ್ಕಾಗ ಯಡಿಯೂರಪ್ಪ ರೈತರಿಗೆ ನೀಡಿದ ಕೊಡುಗೆಯಾದರೂ ಏನು? ಅಧಿಕಾರದಲ್ಲಿದ್ದಾಗ ಏನು ಮಾಡದವರು ಈಗ ಮತದಾರರನ್ನು ಮತ್ತೊಮ್ಮೆ ಮರುಳು ಮಾಡಲು ಹೊರಟಿದ್ದಾರೆ ಎಂದು ದೂರಿದರು.

ಬೆಳಗ್ಗೆ ಎದ್ದರೆ ಸಾಕು ಆಪರೇಷನ್‌ ಕುರಿತಾದ ಮಾತುಗಳೇ ಕೇಳಿಬರುತ್ತವೆ. ನಮ್ಮ ಶಾಸಕರುಗಳೇ ದೂರವಾಣಿ ಕರೆ ಮಾಡಿ ಅಣ್ಣಾ ಅಷ್ಟುಕೋಟಿ ಕೊಡುತ್ತಾರಂತೆ, ಇಷ್ಟುಕೋಟಿ ಕೊಡುತ್ತಾರಂತೆ ಎಂದು ಹೇಳುತ್ತಿದ್ದಾರೆ. ನನಗೂ ಅವರಂತೆ ರಾಜಕೀಯ ಮಾಡುವುದಕ್ಕೆ ಬರುತ್ತದೆ. ನಾವು ಏನು ಮಾಡಬೇಕು ಗೊತ್ತಿದೆ. ಆದರೆ ಅವರಂತೆ ನಡೆಯುವುದು ಬೇಡವೆಂದು ಸುಮ್ಮನಿದ್ದೇನೆ ಎಂದರು.

ಜನಾರ್ದನ ರೆಡ್ಡಿಯನ್ನು ಪಕ್ಷದ ಲೀಡರ್‌ ಎಂದು ಬಿಜೆಪಿ ಮೊದಲು ಒಪ್ಪಿಕೊಳ್ಳಲಿ. ನಂತರ ಅವರ ಮಾತಿಗೆ ಹೆಚ್ಚು ಮನ್ನಣೆ ಬರುತ್ತದೆ. ಅವರು ಏನೇ ಮಾತನಾಡಲಿ. ನಾನು ಪರಿಗಣಿಸುವುದಿಲ್ಲ ಎಂದರು.