ನವದೆಹಲಿ[ಸೆ.11]: ಇ.ಡಿ. ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಈಗ ಹಿಂದಿ ಕಲಿಯಲು ಆರಂಭಿಸಿದ್ದಾರೆ!

ಹೌದು, ಡಿ.ಕೆ. ಶಿವಕುಮಾರ್‌ ಕನ್ನಡ ಮತ್ತು ಇಂಗ್ಲಿಷ್‌ ಅನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಸಂಸ್ಕೃತ ಶ್ಲೋಕಗಳನ್ನೂ ಹೇಳಿ ಬಿಡುತ್ತಾರೆ. ಆದರೆ, ದಕ್ಷಿಣ ಭಾರತದ ಬಹುತೇಕ ರಾಜಕಾರಣಿಗಳ ಹಾಗೆಯೇ ಹಿಂದಿ ಎಂದರೆ ಡಿ.ಕೆ.ಶಿವಕುಮಾರ್‌ ಅವರಿಗೂ ಅಷ್ಟಕಷ್ಟೆ. ಹೇಳಿ ಕೇಳಿ ದೆಹಲಿಯಲ್ಲಿ ಹಿಂದಿಯದ್ದೇ ಕಾರುಬಾರು.

ಡಿ.ಕೆ. ಶಿವಕುಮಾರ್‌ ಇ.ಡಿ. ಕಸ್ಟಡಿ ಸೇರಿಕೊಂಡು 7 ದಿನಗಳಾಗಿದೆ. ಇ.ಡಿ. ಅಧಿಕಾರಿಗಳು ಇಂಗ್ಲಿಷ್‌ ಬಲ್ಲರು. ಆದರೆ ಡಿ.ಕೆ. ಶಿವಕುಮಾರ್‌ರದ್ದು ರಾತ್ರಿಯ ಹೊತ್ತು ತುಘಲಕ್‌ ರೋಡ್‌ ಠಾಣೆಯಲ್ಲಿ ವಾಸ್ತವ್ಯ. ಅಲ್ಲಿನ ಕಾನ್ಸ್‌ಟೇಬಲ್‌ಗಳು ಹಿಂದಿ ಮಾತ್ರ ಬಲ್ಲರು. ರಾತ್ರಿ ಹೊತ್ತು ಒಂಚೂರಾದರೂ, ಯಾವುದೇ ಕೆಲಸಕ್ಕಾದರೂ ಪೊಲೀಸರ ಜೊತೆ ಮಾತನಾಡೋಣವೆಂದರೆ ಭಾಷಾ ಸಮಸ್ಯೆ. ಈ ಸಮಸ್ಯೆಯಿಂದ ಹೊರ ಬಂದು ಅಗತ್ಯ ಸಂವಹನದಷ್ಟಾದರೂ ಹಿಂದಿ ಕಲಿಯೋಣ ಎಂದುಕೊಂಡ ಡಿ.ಕೆ. ಶಿವಕುಮಾರ್‌ ಅದಕ್ಕಾಗಿ ‘ಹಿಂದಿ ಕಲಿಯಿರಿ’ ಪುಸ್ತಕದ ಮೊರೆ ಹೋಗಿದ್ದಾರೆ.

ಮಂಗಳವಾರ ಇ.ಡಿ. ಕಚೇರಿಯಿಂದ ಪೊಲೀಸ್‌ ಠಾಣೆಗೆ ತೆರಳುವಾಗ ಅವರ ಕೈಯಲ್ಲಿ ‘ಇಂಗ್ಲಿಷ್‌ ಟು ಹಿಂದಿ’ ಭಾಷಾಂತರದ ಪುಸ್ತಕ ಇತ್ತು.